ಇಂಫಾಲ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಮಣಿಪುರದ ಮತಗಟ್ಟೆಯೊಂದರಲ್ಲಿ ಗುಂಡಿನ ದಾಳಿ ನಡೆದಿದೆ. ಏಕಾಏಕಿ ಗುಂಡಿನ ದಾಳಿ ನಡೆದುದರಿಂದ ಮತಗಟ್ಟೆಯಲ್ಲಿ ಮತದಾನಕ್ಕೆ ಬಂದಿದ್ದ ಮತದಾರರು ದಿಕ್ಕಾಪಾಲಾಗಿ ಓಡಿದ್ದಾರೆ. ಬಿಷ್ಣುಪುರ ಜಿಲ್ಲೆಯ ಧಮನ್ ಪೋಕ್ಪಿ ಮತದಾನ ಕೇಂದ್ರದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿತ್ತು. ಇದೇ ವೇಳೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಘಟನೆಯನ್ನು ಮೊಬೈಲ್ ನಲ್ಲಿ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದು, ಈ ವಿಡಿಯೋ ವೈರಲ್ ಆಗಿದೆ. ದಾಳಿಕೋರರು ಇವಿಎಂ ಮೆಶಿನ್ ಒಡೆದು ಹಾಕಿದ್ದಾರೆ ಎನ್ನಲಾಗಿದೆ. ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಮಣಿಪುರದಲ್ಲಿ ಏ 26ರಂದು ಎರಡನೇ ಸುತ್ತಿನ ಮತದಾನ ನಡೆಯಲಿದ್ದು, ಈ ವೇಳೆ ಹೆಚ್ಚಿನ ಭದ್ರತೆ ನಿಯೋಜಿಸುವ ಸಾಧ್ಯತೆಯಿದೆ.