ಮಂಗಳೂರು: ರಾಜ್ಯದ ಕರಾವಳಿ ಭಾಗವಾದ ತುಳುನಾಡಿಗೆ ಪ್ರತ್ಯೇಕ ರೈಲ್ವೆ ವಿಭಾಗ ರಚಿಸಿ, ಸ್ಥಳೀಯ ರೈಲ್ವೆ ಸಮಸ್ಯೆಗಳನ್ನು ನೀಗಿಸಿ, ರೈಲ್ವೆ ಸೇವೆಯನ್ನು ಅಭಿವೃದ್ಧಿ ಪಡಿಸುವಂತೆ ರೈಲ್ವೆ ಮತ್ತು ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ವಿ. ಸೋಮಣ್ಣರಿಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ವಿನಂತಿಸಿದ್ದಾರೆ. ಈ ಸಂಬಂಧ ಅವರು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ದಕ್ಷಿಣ ರೈಲ್ವೆಯು ಪಾಲ್ಘಾಟ್ ವಿಭಾಗವು ತೋಕೂರುವರೆಗೆ, ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರಿನಿಂದ ಹಾಸನ ಮಾರ್ಗವಾಗಿ ಮಂಗಳೂರು ಜಂಕ್ಷನ್‌ವರೆಗೆ ಮತ್ತು ರೋಹದಿಂದ ತೋಕೂರುವರೆಗೆ ಕೊಂಕಣ ರೈಲ್ವೆ ನಿಗಮಕ್ಕೆ ಸಂಬಂಧಪಟ್ಟಿರುತ್ತದೆ. ಪಾಲ್ಘಾಟ್, ಮೈಸೂರು ಮತ್ತು ಕೊಂಕಣ ರೈಲ್ವೆಗೆ ಮಂಗಳೂರು ಸಂಪರ್ಕ ಕೊಂಡಿಯಾಗಿರುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡಿ. ಕರ್ನಾಟಕ ಕರಾವಳಿ ಭಾಗದ ರೈಲ್ವೆ ಪ್ರದೇಶಕ್ಕೆ ಪ್ರತ್ಯೇಕ ಮಂಗಳೂರು ವಿಭಾಗ ಸೃಜಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತುಳುನಾಡಿಗೆ ಪ್ರತ್ಯೇಕ ರೈಲ್ವೆ ವಿಭಾಗ ರಚಿಸುವಂತೆ ಇತ್ತೀಚೆಗೆ ಆರಂಭವಾದ ಆನ್‌ಲೈನ್ ಪಿಟಿಷನ್ ಅಭಿಯಾನದ ಕುರಿತಂತೆ ʻತುಳುನಾಡು ವಾರ್ತೆʼ ವಾರಪತ್ರಿಕೆಯ ಕಳೆದ ಸಂಚಿಕೆಯಲ್ಲಿ ವಿಸ್ತೃತ ವರದಿಯಾಗಿತ್ತು. ಆ ನಂತರ ಈ ಬಗ್ಗೆ ತುಳುನಾಡಿನ ಜನಪ್ರತಿನಿಧಿಗಳು ಸಕ್ರಿಯವಾಗಿದ್ದು, ಸಂಸದ ಬ್ರಿಜೇಶ್ ಚೌಟ ಮನವಿ ಮೇರೆಗೆ ನಗರಕ್ಕೆ ಆಗಮಿಸಿರುವ ಸಚಿವ ವಿ. ಸೋಮಣ್ಣ ಇಲ್ಲಿನ ರೈಲ್ವೆ ನಿಲ್ದಾಣಗಳಿಗೆ ಇಂದು ಭೇಟಿ ನೀಡಿದ್ದಾರೆ.