Saturday, September 14, 2024
Homeಉಡುಪಿಮಾ.23 : 'ಮಿಸ್ಟರ್ ಕರಾವಳಿ ಕ್ಲಾಸಿಕ್ 2024' ಮತ್ತು 'ಮಿಸ್ಟರ್ ಬಿಲ್ಲವ 2024' ದೇಹದಾರ್ಢ್ಯ ಸ್ಪರ್ಧೆ

ಮಾ.23 : ‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ಮತ್ತು ‘ಮಿಸ್ಟರ್ ಬಿಲ್ಲವ 2024’ ದೇಹದಾರ್ಢ್ಯ ಸ್ಪರ್ಧೆ

ಉಡುಪಿ-ಬನ್ನಂಜೆ ಶಿವಗಿರಿ ಸಭಾ ಭವನದಲ್ಲಿ

ಕರಾವಳಿ ಕರ್ನಾಟಕ ದೇಹದಾರ್ಢ್ಯ ಪಟುಗಳ ತವರೂರು. ವಿಶೇಷವಾಗಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರತಿಭಾನ್ವಿತ ದೇಹದಾರ್ಢ್ಯ ಪಟುಗಳ ತಾಣ ಎಂದು ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಈಗಾಗಲೇ ಜಿಲ್ಲಾ, ಅಂತರ್ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅನೇಕ ದೇಹದಾರ್ಢ್ಯ ಸ್ಪರ್ಧೆಗಳನ್ನು ಉಡುಪಿ ಪರಿಸರ ಹಾಗೂ ಜಿಲ್ಲೆಯಾದ್ಯoತ ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ.

ಪ್ರಸ್ತುತ ಕರ್ನಾಟಕ ಎಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಇದರ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಇದರ ಸಹಯೋಗದೊಂದಿಗೆ ಸಂಚಾಲನಾ ಸಮಿತಿಯು ಪ್ರತಿಭಾನ್ವಿತ ಹಾಗೂ ಉದಯೋನ್ಮುಖ ದೇಹದಾರ್ಢ್ಯ ಪಟುಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಮಾರ್ಚ್ 23, 2024ನೇ ಶನಿವಾರ ಉಡುಪಿ-ಬನ್ನಂಜೆ ಶ್ರೀ ನಾರಾಯಣ ಗುರು ಮಂದಿರದ ‘ಶಿವಗಿರಿ ಸಭಾಭವನ’ದಲ್ಲಿ ‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ಮತ್ತು ‘ಮಿಸ್ಟರ್ ಬಿಲ್ಲವ 2024’ ದೇಹದಾರ್ಢ್ಯ ಸ್ಪರ್ಧೆಗಳನ್ನು ಆಯೋಜಿಸಿದೆ ಎಂದು ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ‘ಮಿ. ಇಂಡಿಯಾ’ ಗೋವರ್ಧನ ಎನ್. ಬಂಗೇರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಏಪ್ರಿಲ್ 6 ಮತ್ತು 7ರಂದು ಗೋವಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ‘ಫೆಡರೇಶನ್ ಕಪ್’ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ದೇಹದಾರ್ಢ್ಯ ಪಟುಗಳ ಆಯ್ಕೆಗಾಗಿ ‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಮಾ.23ರಂದು ಸಂಜೆ ಗಂಟೆ 6.00ರಿಂದ ನಡೆಯಲಿದೆ.

ಈ ಸ್ಪರ್ಧೆಯಲ್ಲಿ ಯಾವುದೇ ದೇಹದಾರ್ಢ್ಯ ಪಟುಗಳಿಗೆ ಭಾಗವಹಿಸಲು ಅವಕಾಶವಿರುತ್ತದೆ. ದೇಹ ತೂಕದ 55, 60, 65, 70, 75, 80, 85 ಮತ್ತು 85 ಕೆಜಿ ಮೇಲ್ಪಟ್ಟು ಒಟ್ಟು 8 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ಟೈಟಲ್, ರನ್ನರ್ ಅಪ್ ಮತ್ತು ಬೆಸ್ಟ್ ಪೋಸರ್ ಸಹಿತ ಪ್ರತಿ ವಿಭಾಗಗಳಲ್ಲಿ 5 ಸ್ಥಾನಗಳ ವಿಜೇತರನ್ನು ಆಕರ್ಷಕ ನಗದು ಬಹುಮಾನ ಮತ್ತು ಮೆಡಲ್ ನೀಡಿ ಪುರಸ್ಕರಿಸಲಾಗುವುದು.

ಮಾ.23ರ ಬೆಳಿಗ್ಗೆ ಗಂಟೆ 10.30ರಿಂದ ಇಂಡಿಯನ್ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ದಿ! ಮಾಧವ ಪೂಜಾರಿ ಸ್ಮರಣಾರ್ಥ ಟ್ರೋಫಿಯ ‘ಮಿಸ್ಟರ್ ಬಿಲ್ಲವ 2024’ ದೇಹದಾರ್ಢ್ಯ ಸ್ಪರ್ಧೆಯು ‘ಸೀನಿಯರ್ಸ್ ಮತ್ತು ಮಾಸ್ಟರ್ಸ್’ ವಿಭಾಗದಲ್ಲಿ ನಡೆಯಲಿದೆ.

ರಾಜ್ಯದಲ್ಲೇ ಪ್ರಥಮ ಬಾರಿಗೆ ನಡೆಯಲಿರುವ ಈ ಸ್ಪರ್ಧೆಯಲ್ಲಿ ಬಿಲ್ಲವ ಸಮಾಜದ ದೇಹದಾರ್ಢ್ಯ ಪಟುಗಳಿಗೆ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲು ಸದವಕಾಶವನ್ನು ಕಲ್ಪಿಸಲಾಗಿದೆ. ಆಕರ್ಷಕ ನಗದು ಬಹುಮಾನ ದೊಂದಿಗೆ ಟೈಟಲ್ ಮತ್ತು ರನ್ನರ್ ಅಪ್ ಪ್ರಶಸ್ತಿ ನೀಡಲಾಗುವುದು.

‘ಮಿಸ್ಟರ್ ಕರಾವಳಿ ಕ್ಲಾಸಿಕ್ 2024’ ಸ್ಪರ್ಧೆಯನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.) ಅಂಬಲಪಾಡಿ ಇದರ ಪ್ರವರ್ತಕ ನಾಡೋಜ ಡಾ! ಜಿ.ಶಂಕರ್ ಉದ್ಘಾಟಿಸಲಿದ್ದು, ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್(ರಿ.) ಇದರ ಅಧ್ಯಕ್ಷ ಜೆ.ನೀಲಕಂಠ ಅಧ್ಯಕ್ಷತೆ ವಹಿಸಲಿದ್ದಾರೆ.

‘ಮಿಸ್ಟರ್ ಬಿಲ್ಲವ 2024’ ಸ್ಪರ್ಧೆಯನ್ನು ಬಿಲ್ಲವರ ಸೇವಾ ಸಂಘ(ರಿ.) ಮಲ್ಪೆ ಇದರ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ಉದ್ಘಾಟಿಸಲಿದ್ದು, ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್(ರಿ.) ಇದರ ಗೌರವಾಧ್ಯಕ್ಷ ‘ಮಿ! ಇಂಡಿಯಾ’ ಗೋವರ್ಧನ ಎನ್. ಬಂಗೇರ ಅಧ್ಯಕ್ಷತೆ ವಹಿಸಲಿದ್ದಾರೆ.

ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಾಮಾಜಿಕ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ದೇಹದಾರ್ಢ್ಯ ಪಟುಗಳು ಮತ್ತು ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ವಿನಂತಿದರು.

ರಾಷ್ಟ್ರೀಯ ತೀರ್ಪುಗಾರ ಹಾಗೂ ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್(ರಿ.) ಉಪಾಧ್ಯಕ್ಷ ಗಂಗಾಧರ್ ಎಮ್., ರಾಷ್ಟ್ರೀಯ ತೀರ್ಪುಗಾರ ಹಾಗೂ ಸಂಚಾಲನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಸಾಲ್ಯಾನ್, ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಹಾಗೂ ಸಂಚಾಲನಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ರಾಷ್ಟ್ರೀಯ ತೀರ್ಪುಗಾರ ಹಾಗೂ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಾಮತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular