ಮಂಗಳೂರು: ವಿಶ್ವಹಿಂದೂ ಪರಿಷತ್ ಮಂಗಳೂರು ವತಿಯಿಂದ ಮಾ.12ರಂದು ಬೆಳಗ್ಗೆ 6ಕ್ಕೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಿಂದ ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಹಮ್ಮಿಕೊಳ್ಳಲಾಗಿದೆ.
ಹಿಂದು ಸಮಾಜದ ಐಕ್ಯತೆ, ಲೋಕಕಲ್ಯಾಣಾರ್ಥವಾಗಿ ಹಾಗೂ ದೇಶ ರಾಮರಾಜ್ಯವಾಗಲಿ ಎಂಬ ಉದ್ದೇಶದೊಂದಿಗೆ 4ನೇ ವರ್ಷದ ಪಾದಯಾತ್ರೆ ನಡೆಯಲಿದೆ. ಮಾ.17ರಂದು ಬೆಳಗ್ಗೆ 6ಕ್ಕೆ ಕದ್ರಿ ದೇವಸ್ಥಾನದಲ್ಲಿ ಸಾಮೂಹಿಕ ಸಂಕಲ್ಪ, ಪ್ರಾರ್ಥನೆ ಬಳಿಕ ಪಾದಯಾತ್ರೆ ಆರಂಭವಾಗಲಿದೆ. ಬೆಳಗ್ಗೆ 9ಕ್ಕೆ ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಧಾರ್ಮಿಕ ಸಭೆ ನಡೆಯಲಿದೆ. ಸಭೆಯಲ್ಲಿ ವಾಗ್ಮಿ ಶ್ರೀಕಾಂತ ಶೆಟ್ಟಿ ಭಾಗವಹಿಸುವರು ಎಂದು ವಿಶ್ವಹಿಂದು ಪರಿಷತ್ ಮಂಗಳೂರು ವಿಭಾಗ ಸಹಕಾರ್ಯದರ್ಶಿ ಶಿವಾನಂದ ಮೆಂಡನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಮೂರು ವರ್ಷದ ಹಿಂದೆ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ಸಂದರ್ಭ ಕುತ್ತಾರು ಕೊರಜ್ಜ ಕ್ಷೇತ್ರಕ್ಕೆ ಪಾದಯಾತ್ರೆ ಆರಂಭಿಸಲಾಗಿತ್ತು. ಹಿಂದು ವಿರೋಧಿ ಕೃತ್ಯಗಳು ನಿಲ್ಲಲಿ ಎಂಬ ಪ್ರಾರ್ಥನೆಯೊಂದಿಗೆ ಪಾದಯಾತ್ರೆ ನೆರವೇರಲಿದೆ. ಪಾದಯಾತ್ರೆಯಲ್ಲಿ ಭಾಗವಹಿಸುವ ಭಕ್ತರ ಸಂಕಷ್ಟ ದೂರವಾಗಿ ಇಷ್ಟಾರ್ಥ ಸಿದ್ದಿಯಾಗಲೆಂದು ಸಾಮೂಹಿಕ ಸಂಕಲ್ಪ, ಪ್ರಾರ್ಥನೆ ನಡೆಯಲಿದೆ. ಪಾದಯಾತ್ರೆ ಹರಕೆ ಹೊತ್ತವರೂ ಭಾಗವಹಿಸಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಕೊರಗಜ್ಜನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಪಾದಯಾತ್ರೆ ಮುಗಿಸಿ ವಾಪಸ್ ಮಂಗಳೂರಿಗೆ ಆಗಮಿಸುವವರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಬಸ್ ಮಾಲಕರಿಗೆ ವಿನಂತಿಸಲಾಗಿದೆ ಎಂದರು.
ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಪ್ರಾಂತ ಸಹಸೇವಾ ಪ್ರಮುಖ್ ಗೋಪಾಲ ಕುತ್ತಾರ್, ಜಿಲ್ಲಾ ವಿಶೇಷ ಸಂಪರ್ಕ ಪ್ರಮುಖ್ ಪ್ರವೀಣ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ರವಿ ಆಸೈಗೋಳಿ, ಬಜರಂಗದಳ ಜಿಲ್ಲಾ ಸಂಯೋಜಕ ನವೀನ್ ಮೂಡುಶಪ್ಪ ಉಪಸ್ಥಿತರಿದ್ದರು.