ಸ್ಯಾಂಡಲ್‌ವುಡ್‌ನಲ್ಲಿ ತುಳುನಾಡು ಮೂಲದ ಕಥೆ ಮೂಲಕ ಮತ್ತೊಂದು ಸಿನೆಮಾ ಸಿದ್ಧವಾಗುತ್ತಿದೆ. ʻಮಾರ್ನಮಿʼ ಕನ್ನಡ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ತುಳುವರು ಅಬ್ಬರಿಸುವ ಮುನ್ಸೂಚನೆ ನೀಡಿದ್ದಾರೆ. ಪಿಂಗಾರ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರೀತಂ ಆರ್ ಶೆಟ್ಟಿ ಗರಡಿಯಲ್ಲಿ ಪಳಗಿರುವ ರಿಶಿತ್ ಶೆಟ್ಟಿ ಚೊಚ್ಚಲ ಪ್ರಯತ್ನವೇ ಮಾರ್ನಮಿ. ಈ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಎಸ್.ಆರ್.ವಿ. ಥಿಯೇಟರ್‌ನಲ್ಲಿ ಮಾಡಲಾಯಿತು. ಈ ವೇಳೆ ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಕರಾವಳಿ ಭಾಗದಲ್ಲಿ ನಡೆಯುವ ಲವ್ ಸ್ಟೋರಿ ಚಿತ್ರದಲ್ಲಿದೆ. ದಸರಾ ಹಬ್ಬವನ್ನು ತುಳುವಿನಲ್ಲಿ ಮಾರ್ನಮಿ ಎಂದು ಕರೆಯುತ್ತಾರೆ. ಚಿತ್ರದಲ್ಲಿ ಒಳ್ಳೆ ಸ್ಟಾರ್ ಕಾಸ್ಟ್ ಇದೆ. ಅದ್ಭುತ ತಾಂತ್ರಿಕ ವರ್ಗ ಇದೆ. ನಿರ್ಮಾಪಕರೂ ನಾವು ಹೇಳಿದ್ದನ್ನು ಒದಗಿಸಿಕೊಡುತ್ತಿದ್ದಾರೆ. ಇಂತಹ ನಿರ್ಮಾಪಕರು ಇಂಡಸ್ಟ್ರಿಗೆ ಸಿಗಬೇಕು. ಅವರು ಗೆದ್ದರೆ ಇನ್ನಷ್ಟು ಸಿನೆಮಾ ಮಾಡುತ್ತಾರೆ ಎಂದು ಈ ವೇಳೆ ಮಾತನಾಡಿದ ನಟ ರಿತ್ವಿಕ್ ಹೇಳಿದ್ದಾರೆ.
ಕಥೆ ಬಹಳ ಇಷ್ಟವಾಯಿತು, ಡೇಟ್ ಸಮಸ್ಯೆ ಇದೆ ಆಗಲ್ಲ ಎಂದಿದ್ದೆ. ಆದರೆ ಮತ್ತೆ ಕಥೆ ನನ್ನ ಬಳಿಯೇ ಬಂತು. ಡೇಟ್ ಅಡ್ಜಸ್ಟ್ ಮಾಡಿಕೊಳ್ಳೋಣ ಅಂದರು. ಅದ್ಭುತ ಕಥೆ. ರಿಷಿತ್ ಕಥೆ ಹೇಳಲು ಬಂದಾಗ ಎಲ್ಲಿಯೂ ಕಥೆ ಬೋರ್ ಆಗಲಿಲ್ಲ. ಇಷ್ಟು ಬೇಗ ಮುಗಿಯಿತಾ ಅನಿಸಿತು. ಅವರ ಜೊತೆಗೆ ಕೆಲಸ ಮಾಡಲು ಖುಷಿ ಇದೆ. ಕಥೆ ನಂಬಿದ್ದೇಎ. ನಾನು ಶೂಟಿಂಗ್‌ಗೆ ಹೊರಡಲು ಎಕ್ಸೈಟ್ ಆಗಿದ್ದೇನೆ ಎಂದರು.
ಚಿತ್ರದಲ್ಲಿ ಚರಣ್ ರಾಜ್ ಸಂಗೀತವಿರಲಿದೆ. ರಿತ್ವಿಕ್ ಹಾಗೂ ಚೈತ್ರ ಜೆ ಆಚಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರಕಾಶ್ ತೂಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಯಶ್ ಶೆಟ್ಟಿ, ಮೈಮ್ ರಾಮದಾಸ್, ಚೈತ್ರ ಶೆಟ್ಟಿ ಸಹಿತ ಹಲವು ತಾರಾಗಣದಲ್ಲಿರಲಿದ್ದಾರೆ. ಶಿವಸೇನ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.
ಚಿತ್ರದ ಟೈಟಲ್ ಟೀಸರ್ ಗುನಾಧ್ಯ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ ಬಿಡುಗಡೆಯಾಗಿದ್ದು, ಟೀಸರ್ ಪ್ರಾಮಿಸಿಂಗ್ ಆಗಿದೆ. ಕರಾವಳಿ ಭಾಗದ ಹುಲಿವೇಷದ ಹಿನ್ನೆಲೆ ಹಾಗೂ ಹುಲಿವೇಷ ಸಂಸ್ಕೃತಿಯ ಎಳೆ ಚಿತ್ರದಲ್ಲಿ ಇರಲಿದೆ. ಚೆಂದದ ಲವ್ ಸ್ಟೋರಿ ಜೊತೆಗೆ ಆಕ್ಷನ್, ಎಮೋಷನ್, ಕಾಮಿಡಿ ಮಿಶ್ರಣದ ಮಾರ್ನಮಿ ಸಿನಿಮಾಗೆ ಗುನಾಧ್ಯ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ. ಅಕ್ಟೋಬರ್ ಒಂದರಿಂದ ಮಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ನಡೆಸಲು ಚಿತ್ರತಂಡ ಸಜ್ಜಾಗಿದೆ.
ಚಿತ್ರದ ಟೀಸರ್ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ…