ದಕ್ಷಿಣ ಭಾರತದ ತಿರುಪತಿ ತಿಮ್ಮಪ್ಪನ ಪ್ರಸಾದದ ವಿವಾದ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವಾಗಲೇ ಉತ್ತರ ಭಾರತದಲ್ಲೂ ಕಲಬೆರಕೆಯ ಕೂಗು ಕೇಳಿ ಬಂದಿದೆ. ಉತ್ತರ ಪ್ರದೇಶ ಮಥುರಾದ ಕೃಷ್ಣ ದೇವಾಲಯದ ಪ್ರಸಾದದ ಬಗ್ಗೆಯೂ ಸಂದೇಹಗಳನ್ನು ವ್ಯಕ್ತಪಡಿಸಲಾಗಿದ್ದು, ಇದು ಸಹಜವಾಗಿ ಭಕ್ತರಲ್ಲಿ ಆತಂಕವನ್ನುಂಟು ಮಾಡಿದೆ. ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರು ಈ ಬಗ್ಗೆ ಗಮನಹರಿಸುವಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಥುರಾ ದೇವಾಲಯದಲ್ಲಿ ಖೋವಾ ಪ್ರಸಾದ ನೀಡಲಾಗುತ್ತಿದೆ. ಆದರೆ ಅದು ಈಗ ಗುಣಮಟ್ಟದಿಂದ ಕೂಡಿಲ್ಲ ಎಂದು ಸಂಸದೆ ಡಿಂಪಲ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರವು ಮಥುರಾ ದೇವಾಲಯದ ಪ್ರಸಾದದ ಗುಣಮಟ್ಟದ ಕಡೆ ಗಮನ ಕೊಡಬೇಕು ಅವರು ಒತ್ತಾಯಿಸಿದ್ದಾರೆ.
ಉತ್ತರಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಇಂತಹದೊಂದು ಆಕ್ಷೇಪ ವ್ಯಕ್ತಪಡಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ಜೊತೆಗೆ ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ನಾನು ಕೂಡ 2 ವರ್ಷದಿಂದ ಪ್ರಸಾದದ ಗುಣಮಟ್ಟದ ಬಗ್ಗೆ ಹೇಳುತ್ತಿದ್ದೇನೆ. ಮಥುರಾ ಬೃಂದಾವನ ದೇವಾಲಯದ ಪ್ರಸಾದದ ಬಗ್ಗೆ ತನಿಖೆಯಾಗಬೇಕು ಎಂದು ಬ್ರಿಜ್ ಭೂಷಣ್ ಸಿಂಗ್ ಆಗ್ರಹಿಸಿದ್ದಾರೆ.
ತಿರುಪತಿ ಲಡ್ಡು ಪ್ರಸಾದ ಇಡೀ ದೇಶದಲ್ಲೇ ಸಂಚಲನವನ್ನು ಸೃಷ್ಟಿಸಿದೆ. ಮಥುರಾ ದೇವಾಲಯಕ್ಕೂ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಸದ್ಯ ಪ್ರತಿಪಕ್ಷ ನಾಯಕರ ಈ ಆರೋಪ ರಾಜಕೀಯ ತಿರುವು ಪಡೆದುಕೊಂಡಿದೆ. ಆದರೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಈ ಬಗ್ಗೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತದೆ ಎನ್ನುವುದು ಕೃಷ್ಣ ಭಕ್ತರಿಗೆ ಮಹತ್ವದ್ದಾಗಿದೆ.