ಉಜಿರೆ: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ ಮುಂದಿನ ತಿಂಗಳು ಉಜಿರೆಯಲ್ಲಿ ಸದಸ್ಯತ್ವ ಅಭಿಯಾನ ಆಯೋಜಿಸಲಾಗುವುದು ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಹೇಳಿದರು.
ಶನಿವಾರ ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಸಭಾಭವನದಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಸಂಘಕ್ಕೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಬಗ್ಯೆ ಅವರು ಮಾತನಾಡಿ ಧನ ಸಂಗ್ರಹದ ಬಗ್ಯೆ ಸಲಹೆ, ಸೂಚನೆ ನೀಡಿದರು.
ಕೃಷ್ಣ ಭಟ್, ನಿವೃತ್ತ ಮುಖ್ಯೋಪಾಧ್ಯಾಯ ಗಣೇಶ ಐತಾಳ, ಪದ್ಮಕುಮಾರ್ ಮತ್ತು ವಸಂತ ರಾವ್ ದೇಣಿಗೆ ಸಂಗ್ರಹದ ಬಗ್ಯೆ ಅಭಿಪ್ರಾಯ ವ್ಯಕ್ತಪಡಿಸಿದರು. ಇತ್ತೀಚೆಗೆ ನಿಧನರಾದ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ. ಎನ್.ಜಿ. ಪಟವರ್ಧನ್ ಬಗ್ಯೆ ಆರ್.ಯನ್. ಪೂವಣಿ ನುಡಿನಮನ ಸಲ್ಲಿಸಿದರು. ಬಳಿಕ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಮಾಡಲಾಯಿತು. ಸಂಘದ ಕಾರ್ಯದರ್ಶಿ ವಿಶ್ವಾಸ ರಾವ್ ವರದಿ ಸಾದರ ಪಡಿಸಿದರು. ಕುಸುಮಾವತಿ ಸ್ವಾಗತಿಸಿದರು. ವಿಶ್ವಾಸ ರಾವ್ ಧನ್ಯವಾದವಿತ್ತರು.