ಚೆನ್ನೈ: ಮುಟ್ಟಿನ ನೋವು ನಿವಾರಿಸಲು ಮಿತಿಮೀರಿದ ಔಷಧ ಸೇವಿಸಿ 18 ವರ್ಷದ ಯುವತಿಯೊಬ್ಬಳು ಮೃತಪಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಆ.21ರಂದು ವಿಪರೀತ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದ ತಿರುಚ್ಚಿಯ ಮುಸುರಿ ತಾಲೂಕಿನ ಗ್ರಾಮವೊಂದರ ನಿವಾಸಿ ಬಾಲಕಿ ಮಾತ್ರೆ ಸೇವಿಸಿದ್ದಾಳೆ. ಇದು ಓವರ್ ಡೋಸ್ ಆಗಿ ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಯುವತಿಗೆ ಪ್ರತಿ ತಿಂಗಳು ತೀವ್ರ ಮುಟ್ಟಿನ ನೋವು ಇರುತ್ತಿತ್ತು. ಈ ನೋವು ನಿವಾರಣೆಗಾಗಿ ಆಕೆ ಅನೇಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಳು. ಈ ಬಾರಿಯೂ ಅದೇ ರೀತಿ ಔಷಧಿ ಸೇವಿಸಿದ ಬಳಿಕ, ಆಕೆ ವಾಂತಿ ಮಾಡಲಾರಂಭಿಸಿದ್ದಳು. ತಕ್ಷಣವೇ ಆಕೆಯನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದಳು. ಮನೆಗೆ ಬಂದ ಬಳಿಕ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಹಾತ್ಮ ಗಾಂಧಿ ಸ್ಮಾರಕ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ ಮಿತಿ ಮೀರಿದ ಔಷಧ ಸೇವನೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಚಿಕಿತ್ಸೆ ಫಲಿಸದೆ ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.