ಚೆನ್ನೈ: ಉಲ್ಕಾ ಶಿಲೆಯೊಂದು ತಮಿಳುನಾಡಿನ ರೈತರೊಬ್ಬರ ಕೃಷಿ ಭೂಮಿಗೆ ಬಿದ್ದ ಘಟನೆ ವರದಿಯಾಗಿದೆ. ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಆಚಮಂಗಲಂ ಗ್ರಾಮದ ವ್ಯಕ್ತಿಯೊಬ್ಬರು ತಮ್ಮ ಕೃಷಿ ಭೂಮಿಯಲ್ಲಿ ಉಲ್ಕಾ ಶಿಲೆ ಬಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ಉಲ್ಕಾ ಶಿಲೆಯಿಂದ ಭೂಮಿಯಲ್ಲಿ 5 ಅಡಿ ಆಳದ ಹೊಂಡವಾಗಿದ್ದು, ಇಲ್ಲಿಂದ ಶಾಖ ಹೊರಬರುತ್ತಿದೆ ಎನ್ನಲಾಗಿದೆ.
ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರು ಬಂದು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ರಂಧ್ರದ ಆಳದಿಂದ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ವಿಶ್ಲೇಷಣೆಗಾಗಿ ವೆಲ್ಲೂರು ಮತ್ತು ಚೆನ್ನೈಗೆ ಕಳುಹಿಸಿದ್ದಾರೆ.
ಇದು ನೆಲಕ್ಕೆ ಅಪ್ಪಳಿಸಿದ ಉಲ್ಕಶಿಲೆಯಾಗಿದೆ. ಮಂಗಳ ಮತ್ತು ಗುರು ಗ್ರಹಗಳ ನಡುವಿನ ಕ್ಷುದ್ರ ಗ್ರಹಗಳ ಸಾಲಿನಿಂದ ಇಲ್ಲಿಗೆ ಬಂದಿರಬಹುದು. ಇಲ್ಲಿನ ರಂಧ್ರ ಮತ್ತು ಸುತ್ತಮುತ್ತಲಿನ ಪ್ರದೇಶದಿಂದ ಮಾದರಿ ಸಂಗ್ರಹಿಸಿದ್ದೇವೆ ಎಂದು ಜಿಲ್ಲಾ ವಿಜ್ಞಾನ ಅಧಿಕಾರಿ ರವಿ ಹೇಳಿದ್ದಾರೆ.