ತಿರುವನಂತಪುರಂ: ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ರಾಜೀವ ಚಂದ್ರಶೇಖರ್ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದೆ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ ಎಂದು ಸಿಪಿಎಂ ನೇತೃತ್ವದ ಎಲ್ ಡಿಎಫ್ ಮೈತ್ರಿಕೂಟ ವಾಗ್ದಾಳಿ ನಡೆಸಿದೆ.
ರಾಜೀವ ಚಂದ್ರಶೇಖರ್ ಅವರು ಹೆಲಿಕಾಪ್ಟರ್ ಮೂಲಕ ಕರ್ನಾಟಕಕ್ಕೆ ತೆರಳಿ ಮತ ಹಾಕಿ ತಿರುವನಂತಪುರಂಗೆ ವಾಪಾಸ್ ಆಗುವಷ್ಟು ಸಾಮರ್ಥ್ಯವುಳ್ಳವರು. ಆದರೆ ಮತದಾನದಿಂದ ಅವರು ದೂರ ಉಳಿದಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿರುವ ಅವಮಾನ ಎಂದು ಶಿಕ್ಷಣ ಸಚಿವ ವಿ. ಶಿವನಕುಟ್ಟಿ ವಾಗ್ದಾಳಿ ನಡೆಸಿದ್ದಾರೆ.
ಚಂದ್ರಶೇಖರ್ ಅವರು ಮತದಾನ ಮಾಡದಿರುವುದು ಗಂಭೀರ ವಿಷಯವಾಗಿದ್ದು, ತಿರುವನಂತಪುರಂ ಕ್ಷೇತ್ರದ ಜನರಿಗೆ ಮೋಸ ಮಾಡಿದಂತಾಗಿದೆ. ಚಂದ್ರಶೇಖರ್ ಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಸಚಿವ ಜಿ.ಆರ್. ಅನಿಲ್ ಕಿಡಿಕಾರಿದ್ದಾರೆ.
ಆದರೆ ಈ ಬಗ್ಗೆ ರಾಜೀವ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ. ನಾನು ತಿರುವನಂತಪುರಂ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವುದರಿಂದ ನನಗೆ ಈ ಕ್ಷೇತ್ರವೇ ಮೊದಲ ಆದ್ಯತೆಯಾಗಿದೆ. ಚುನಾವಣಾ ದಿನದಂದು ನಾನು ಇಲ್ಲಿರುವುದು ನನ್ನ ಕರ್ತವ್ಯ. ಹೀಗಾಗಿ ಮತ ಚಲಾಯಿಸಲು ನಾನು ಕರ್ನಾಟಕಕ್ಕೆ ಹೋಗಲಿಲ್ಲ ಎಂದು ರಾಜೀವ ಚಂದ್ರಶೇಖರ್ ಹೇಳಿದ್ದಾರೆ.
ತಿರುವನಂತಪುರಂನ ಮತದಾರರ ಪಟ್ಟಿಗೆ ನನ್ನ ಹೆಸರು ಸೇರ್ಪಡೆ ಮಾಡಿಕೊಳ್ಳಲು ಸಮಯದ ಅಭಾವದಿಂದ ಆಗಲಿಲ್ಲ. ಮುಂದಿನ ಚುನಾವಣೆಯಲ್ಲಿ ತಿರುವನಂತಪುರಂನಿಂದಲೇ ಮತದಾನ ಮಾಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.