ಬೆಳ್ತಂಗಡಿ: ಇಲ್ಲಿನ ಪ್ರವಾಸಿ ಬಂಗಲೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಹಿತ ಅನೇಕ ಕಾಮಗಾರಿಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ ಎಂಬ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಮ್ ಆರೋಪಕ್ಕೆ ಹರೀಶ್ ಪೂಂಜಾ ಆಣೆ ಪ್ರಮಾಣ ಮಾಡಿದ್ದಾರೆ. ನಗರದ ಮಾರಿಗುಡಿಯಲ್ಲಿ ಇಂದು ಮುಂಜಾನೆ ಶಾಸಕ ಹರೀಶ್ ಪೂಂಜಾ ದೇವರ ಮುಂದೆ ಪ್ರಮಾಣ ಮಾಡಿ, ತಾನು ಯಾವುದೇ ಕಿಕ್ ಬ್ಯಾಕ್ ಪಡೆದಿಲ್ಲ ಎಂದು ಹೇಳಿದ್ದಾರೆ.
ನಾನು ಯಾವುದೇ ಭ್ರಷ್ಟಾಚಾರ ನಡೆಸಿಲ್ಲ. ಒಂದು ರೂಪಾಯಿ ಕಿಕ್ ಬ್ಯಾಕ್ ಪಡೆದಿಲ್ಲ. ನನ್ನ ಮೇಲೆ ವಿನಾಕಾರಣ ಆರೋಪ ಎಸಗಿರುವ ರಕ್ಷಿತ್ ಶಿವರಾಮ್ ಅವರ ಹೆಂಡತಿ, ಮಕ್ಕಳು ಕುಟುಂಬಕ್ಕೆ ಮಾರಿಯಮ್ಮ ಶಿಕ್ಷೆ ನೀಡಬೇಕು. ಬೆಳ್ತಂಗಡಿಯಲ್ಲಿ ಅಭಿವೃದ್ಧಿ ರಾಜಕೀಯದ ಬದಲಾಗಿ, ಕೆಸರೆರಚಾಟದ ರಾಜಕೀಯ ಇಂದಿಗೆ ಅಂತ್ಯವಾಗಬೇಕು. ನಾನು ಭ್ರಷ್ಟಾಚಾರ ಎಸಗಿದ್ದರೆ ನನಗೆ ಶಿಕ್ಷೆಯಾಗಲಿ ಎಂದು ಮಾರಿಗುಡಿಗೆ ಫಲಪುಷ್ಪ ಅರ್ಪಿಸಿ, ತೆಂಗಿನ ಕಾಯಿ ಹೊಡೆದು ಪೂಂಜಾ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.