ಉಡುಪಿ : ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ 250 ಹಾಸಿಗೆಗಳ ನೂತನ ಜಿಲ್ಲಾಸ್ಪತ್ರೆ ಕಾಮಗಾರಿ ಸ್ಥಳಕ್ಕೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಭೇಟಿ ಕಾಮಗಾರಿಯ ಪ್ರಗತಿ ಹಾಗೂ ಬಾಕಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನೂತನ ಜಿಲ್ಲಾಸ್ಪತ್ರೆಯ ಬೇಡಿಕೆಗೆ ಅನುಗುಣವಾಗಿ ಹುದ್ದೆಗಳ ಮಂಜೂರು, ಸುಸಜ್ಜಿತ ಕ್ರಿಟಿಕಲ್ ಕೇರ್ ಘಟಕ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ, ಅಗತ್ಯ ಮೂಲ ಸೌಕರ್ಯ ಅಭಿವೃದ್ಧಿಗೆ ಕಾಮಗಾರಿಗಳ ಮಂಜೂರಾತಿ ಹಾಗೂ ಉತ್ತಮ ಚಿಕಿತ್ಸೆಗೆ ಪೂರಕ ಅಗತ್ಯ ಸಲಕರಣೆಗಳ ಖರೀದಿ ಮೊದಲಾದ ಬೇಡಿಕೆಗಳ ಬಗ್ಗೆ ಅಧಿಕಾರಿಗಳಿಂದ ಶಾಸಕ ಯಶ್ ಪಾಲ್ ಸುವರ್ಣ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ನೂತನ ಜಿಲ್ಲಾಸ್ಪತ್ರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಒದಗಿಸಲು ವಿಶೇಷ ಆದ್ಯತೆ ನೀಡಲಿದ್ದು, ಆರೋಗ್ಯ ಸಚಿವರನ್ನು ಅತೀ ಶೀಘ್ರದಲ್ಲಿ ಭೇಟಿಯಾಗಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಬಾಕಿ ಅನುದಾನ ಬಿಡುಗಡೆ ಹಾಗೂ ಅಗತ್ಯ ಹುದ್ದೆಗಳ ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕರಾದ ಡಾ. ಅಶೋಕ್, ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು, ಇಲಾಖೆಯ ಇಂಜಿನಿಯರ್ ಹಾಗೂ ಗುತ್ತಿಗೆದಾರ ಕಂಪೆನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.