ಶಿವಮೊಗ್ಗ: ಹೊಟ್ಟೆ ನೋವು ಎಂದು ಕೂಗಾಡುತ್ತಿದ್ದ ಕೈದಿಯೊಬ್ಬನನ್ನು ಪರೀಕ್ಷಿಸಿದಾಗ ಆತನ ಹೊಟ್ಟೆಯಲ್ಲಿ ಮೊಬೈಲ್ ಪತ್ತೆಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಕೇಂದ್ರ ಕಾರಾಗೃಹದ ಕೈದಿ ಪರಶುರಾಮ ಎಂಬಾತ ಹೊಟ್ಟೆ ನೋವೆಂದು ಕೂಗಾಡುತ್ತಿದ್ದನು.
ಹೀಗಾಗಿ ಮೊದಲು ಆತನಿಗೆ ಜೈಲಿನಲ್ಲೇ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಲಾಗಿತ್ತು. ಈ ವೇಳೆ ವೈದ್ಯರು ಕೈದಿಯು ಕಲ್ಲು ನುಂಗಿದ್ದಾನೆ ಎಂದು ಹೇಳಿದ್ದರು. ಬಳಿಕ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ.
ಅಲ್ಲಿ ವೈದ್ಯರು ಪರಶುರಾಮನನ್ನು ಪರೀಕ್ಷಿಸಿದಾಗ ಹೊಟ್ಟೆಯಲ್ಲಿ ಮೊಬೈಲ್ ಇರುವುದು ಪತ್ತೆಯಾಗಿದೆ. ಕೂಡಲೇ ಶಸ್ತ್ರಕ್ರಿಯೆಯ ಮೂಲಕ ಆತನ ಹೊಟ್ಟೆಯಲ್ಲಿದ್ದ ಮೊಬೈಲ್ ಅನ್ನು ಹೊರತೆಗೆಯಲಾಗಿದೆ.
ವೈದ್ಯರು ನಡೆಸಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಆದರೆ ಭದ್ರತೆಯ ನಡುವೆಯೂ ಮೊಬೈಲ್ ಜೈಲಿನೊಳಗೆ ಹೋಗಿದ್ದೇಗೆ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.