ಉಡುಪಿಗೆ ಮೋದಿ ಬಹುಪರಾಕ್​

0
128


ಉಡುಪಿ: ಜನಸಂಘ ಮತ್ತು ಬಿಜೆಪಿ ಆಡಳಿತ ಮಾದರಿಗೆ ಉಡುಪಿ ಉತ್ತಮ ನಿದರ್ಶನವಾಗಿದೆ. 1968 ರಲ್ಲಿ ಜನಸಂಘದ ವಿ.ಎಸ್​. ಆಚಾರ್ಯರು ಪುರಸಭೆಗೆ ಆಯ್ಕೆಯಾದ ಬಳಿಕ ಉಡುಪಿ ಹೊಸ ಆಡಳಿತ ಮಾದರಿಗೆ ಅಡಿಪಾಯ ಹಾಕಿತು. ಇಂದು ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೊಳಿಸಿರುವ ಸ್ವಚ್ಛತಾ ಅಭಿಯಾನವನ್ನು ಉಡುಪಿ ಐದು ದಶಕಗಳ ಹಿಂದೆಯೇ ಅಳವಡಿಸಿಕೊಂಡಿದೆ. ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ಹೊಸ ಮಾದರಿಯನ್ನು 1970ರ ದಶಕದಲ್ಲಿ ಪ್ರಾರಂಭಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷ್ಣಮಠದಲ್ಲಿ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕ ಭೂಮಿಗೆ ಬರುವುದು ಮತ್ತು ಇಲ್ಲಿನ ಪ್ರೀತಿಯ ಜನರ ನಡುವೆ ಇರುವುದು ನನಗೆ ಅನನ್ಯ ಅನುಭವವನ್ನು ನೀಡುತ್ತದೆ. ನಾನು ಗುಜರಾತ್​ನಲ್ಲಿ ಜನಿಸಿದರೂ, ಗುಜರಾತ್​ ಮತ್ತು ಉಡುಪಿ ನಡುವೆ ಯಾವಾಗಲೂ ಆಳವಾದ ಮತ್ತು ವಿಶೇಷ ಸಂಬಂಧವಿದೆ. ಇಲ್ಲಿನ ಕೃಷ್ಣನ ವಿಗ್ರಹವನ್ನು ಮೊದಲು ಮಾತಾ ರುಕ್ಮಿಣಿ ಪೂಜಿಸಿದ್ದು, ನಂತರ ಜಗದ್ಗುರು ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು ಎಂಬ ನಂಬಿಕೆ ಇದೆ ಎಂದರು.

ನಾನು ಕೇವಲ ಮೂರು ದಿನಗಳ ಹಿಂದೆ ಗೀತೆಯಭೂಮಿ ಕುರುಕ್ಷೇತ್ರದಲ್ಲಿದ್ದೆ. ಇಂದು ಭಗವಾನ್​ ಶ್ರೀ ಕೃಷ್ಣ ಮತ್ತು ಜಗದ್ಗುರು ಶ್ರೀ ಮಧ್ವಾಚಾರ್ಯರ ಮಹಿಮೆಯಿಂದ ಆಶೀರ್ವದಿಸಲ್ಪಟ್ಟ ಈ ಭೂಮಿಗೆ ಬರುವುದು ಪರಮ ಸಂತೃಪ್ತಿ ತಂದಿದೆ. ಉಡುಪಿ ಜ್ಞಾನ, ಭಕ್ತಿ ಸೇವಾ ಸಂಗಮ ಕ್ಷೇತ್ರ. ಜನ ಸೇವೆಯ ಶಾಶ್ವತ ಪರಂಪರೆ ಹೊಂದಿದೆ. ಮಧ್ಚಾಚಾರ್ಯರ ತತ್ವದ ಪ್ರಭಾವದಿಂದಲೇ ಹರಿದಾಸ ಪಂಥ ಬೆಳೆದು ಬಂದಿದ್ದು, ಪುರಂದರ ದಾಸರು ಮತ್ತು ಕನಕ ದಾಸರು ಸರಳ ಕನ್ನಡದ ಹಾಡುಗಳ ಮೂಲಕ ಭಕ್ತಿಯ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸಿದರು ಎಂದು ಹೇಳಿದರು.


ವಿಶ್ವೇಶ ತೀರ್ಥರ ಸ್ಮರಣೆ
ಉಡುಪಿಗೆ ಬರುವ ಮೂರು ದಿನಗಳ ಮೊದಲು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ಧರ್ಮ ಧ್ವಜವನ್ನು ಸ್ಥಾಪಿಸಲಾಯಿತು. ರಾಮ ಮಂದಿರ ಚಳುವಳಿಯಲ್ಲಿ ಉಡುಪಿ ವಹಿಸಿರುವ ಮಹತ್ವದ ಪಾತ್ರವನ್ನು ಇಡೀ ರಾಷ್ಟ್ರವು ತಿಳಿದಿದೆ. ದಶಕಗಳ ಹಿಂದೆ ಸ್ವರ್ಗಿಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಇಡೀ ಚಳುವಳಿಗೆ ಮಾರ್ಗದರ್ಶನ ನೀಡಿದ್ದರು. ಧ್ವಜಾರೋಹಣ ಸಮಾರಂಭವು ಅವರ ಕೊಡುಗೆ ಫಲಪ್ರದವಾಗಿರುವುದರ ಸಂಕೇತ ಎಂದು ಸ್ಮರಿಸಿದರು.
ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಶೀರ್ವಚನ ನೀಡಿ, ರಾಮಮಂದಿರದಲ್ಲಿ ಧ್ವಜಸ್ಥಾಪನೆಗೈದು ನಿರ್ಮಾಣ ಕಾರ್ಯ ಪೂರ್ಣವಾದ ಬಳಿಕ ಕೃಷ್ಣಾರ್ಪಣೆಗೈಲು ಪ್ರಧಾನಿ ಉಡುಪಿಗೆ ಬಂದಿದ್ದಾರೆ ಎಂದು ಹೇಳಿದರು. ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರೆ ಕೃಷ್ಣನ ಸಂದೇಶ. ಪ್ರಧಾನಿಯವರು ಗೀತೆಯ ಈ ಸಂದೇಶವನ್ನು ಪೂರ್ಣಪ್ರಮಾಣದಲ್ಲಿ ಜೀವನದಲ್ಲಿ ಅನುಷ್ಠಾನ ಮಾಡುತ್ತಿದ್ದಾರೆ ಎಂದರು.
ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿ.ವೈ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಶಾಸಕರಾದ ವಿ. ಸುನಿಲ್​ ಕುಮಾರ್​, ಯಶ್​ಪಾಲ್​ ಸುವರ್ಣ, ಗುರುರಾಜ್​ ಶೆಟ್ಟಿ ಗಂಟಿಹೊಳೆ, ಕಿರಣ್​ ಕುಮಾರ್​ ಕೊಡ್ಗಿ ಹಾಗೂ ಗುರ್ಮೆ ಸುರೇಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯಸಭಾ ಸಂಸದ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು. ಗೋಪಾಲಾಚಾರ್ಯ ಹಾಗೂ ಡಾ. ತನ್ಮಯ ಗೋಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here