Thursday, December 5, 2024
HomeUncategorizedಹೋಮ್‌ವರ್ಕ್ ಪರೀಕ್ಷಿಸುವ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ:ಮೂಡುಬಿದಿರೆ ಪ್ರೌಢಶಾಲೆಯ ಶಿಕ್ಷಕನಿಗೆ 5 ವರ್ಷ ಜೈಲು

ಹೋಮ್‌ವರ್ಕ್ ಪರೀಕ್ಷಿಸುವ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ:ಮೂಡುಬಿದಿರೆ ಪ್ರೌಢಶಾಲೆಯ ಶಿಕ್ಷಕನಿಗೆ 5 ವರ್ಷ ಜೈಲು

ಬೆಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಮೂಡುಬಿದಿರೆ ಪ್ರೌಢಶಾಲೆಯೊಂದರ ಶಿಕ್ಷಕನಿಗೆ ನ್ಯಾಯಾಲಯ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಬೆಳ್ತಂಗಡಿ ಮೂಲದ ಗುರುವ ಮೊಗೇರ (49) ಶಿಕ್ಷೆಗೊಳಗಾದ ವ್ಯಕ್ತಿ. ಕಳೆದ ಫೆಬ್ರವರಿಯಲ್ಲಿ 10ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಶಿಕ್ಷಕ ಅನುಚಿತವಾಗಿ ಸ್ಪರ್ಶಿಸಿದ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿತ್ತು.

ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿರುವ ಆರೋಪಿ ವಿದ್ಯಾರ್ಥಿನಿಯರನ್ನು ಸ್ಟಾಫ್‌ರೂಮ್ ಹೊರತುಪಡಿಸಿ ಬೇರೆ ಬೇರೆ ಕೋಣೆಗೆ ಕರೆಸಿ ಹೋಮ್‌ವರ್ಕ್ ಪರೀಕ್ಷಿಸುತ್ತಿದ್ದ. ಅಷ್ಟೇ ಅಲ್ಲದೇ ಪಾಠದ ಬಗ್ಗೆ ಅನುಮಾನಗಳನ್ನು ಪರಿಹರಿಸಿಕೊಳ್ಳುವಂತೆ ಹೇಳುತ್ತಿದ್ದ. ಕಳೆದ ಫೆಬ್ರವರಿ 22ರಂದು ಸಂತ್ರಸ್ತ ಬಾಲಕಿಯನ್ನು ಶಾಲೆಯ ಕೊಠಡಿಗೆ ಕರೆದು ಲೈಂಗಿಕ ಕಿರುಕುಳ ನೀಡಿದ್ದ. ಈ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ.

ಶಾಲೆಯ ಮುಖ್ಯೋಪಾಧ್ಯಾಯರು ನೀಡಿದ ದೂರಿನ ಆಧಾರದ ಮೇಲೆ ಕಳೆದ ಮಾರ್ಚ್ 12ರಂದು ಗುರುವ ಮೊಗೇರನ ವಿರುದ್ಧ ಎಫ್‌ಐಆ‌ರ್ ದಾಖಲಿಸಲಾಗಿತ್ತು. ಐಪಿಸಿ ಸೆಕ್ಷನ್ 354 ಮತ್ತು ಪೋಕೋ ಕಾಯ್ದೆಯ ಸೆಕ್ಷನ್ 10, 12ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿತ್ತು. ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟ‌ರ್ ಶಿವರುದ್ರಮ್ಮ ಎಸ್ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಮತ್ತು ಎಫ್‌ಟಿಎಸ್‌ಸಿ 1 ನ್ಯಾಯಾಲಯದ ನ್ಯಾಯಾಧೀಶ ಡಿ. ವಿನಯ್ ಶಿಕ್ಷಕನನ್ನು ಅಪರಾಧಿ ಎಂದು ಪರಿಗಣಿಸಿ ಐದು ವರ್ಷಗಳ ಸಾದಾ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿದ್ದು, ಸಂತ್ರಸ್ತೆಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟ‌ರ್ ಸಹನಾದೇವಿ ಬೋಳೂರು ಸಂತ್ರಸ್ತೆಯ ಪರ ವಾದ ಮಂಡಿಸಿದ್ದರು.

RELATED ARTICLES
- Advertisment -
Google search engine

Most Popular