ಮೂಡುಬಿದಿರೆ: ಪ್ರತಿಷ್ಠಿತ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯೋರ್ವ ವಸತಿ ನಿಲಯದ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ವರದಿಯಾಗಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಶರಣಾದವರನ್ನು ಬೆಂಗಳೂರು ಸಮೀಪದ ಹೊಸೂರು ನಿವಾಸಿ ಪ್ರಸ್ತುತ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ತೃತೀಯ ವರ್ಷದ ಬಿಬಿಎಂ ವಿದ್ಯಾಭ್ಯಾಸ ಮಾಡುತ್ತಿದ್ದ ಶಶಾಂಕ್ ಎಂದು ಗುರುತಿಸಲಾಗಿದೆ. ಶಶಾಂಕ್ ಕಾಲೇಜಿನ ಯಮುನಾ ಬಾಲಕರ ವಸತಿ ನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ಬರೆದಿಟ್ಟಿದ್ದಾನೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡೆತ್ ನೋಟನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹವನ್ನು ಮೂಡುಬಿದಿರೆ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ನಡೆಸಿ ಶುಕ್ರವಾರ ಬೆಳಗ್ಗೆ ಹೆತ್ತವರಿಗೆ ಹಸ್ತಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿ ಪ್ರಕರಣದಾಖಲಿಸಿಕೊಂಡಿರುವ ಮೂಡುಬಿದಿರೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.