ಮೂಡುಬಿದಿರೆ : ಸಿಂಗಾಪುರದಲ್ಲಿ ನಡೆದ ಏಷ್ಯನ್ ಫೋಟೋಗ್ರಾಫಿಕ್ ಯೂನಿಯನ್ ಹಾಗೂ ಗೋಲ್ಡನ್ ಪಿಕಾಕ್ ಅವಾರ್ಡ್ ಸಿಂಗಪುರ್ ಜಂಟಿ ಆಶ್ರಯದಲ್ಲಿ ನಡೆದ “ಗೋಲ್ಡ್ ಆಫ್ ಗೋಲ್ಡನ್ ಮೆಡಲ್” ಪ್ರಶಸ್ತಿಗೆ ಜಿನೇಶ್ ಪ್ರಸಾದ್ ಮೂಡುಬಿದಿರೆ ಅವರು ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಗೆ ಆಯ್ಕೆ ಮಾಡುವ ಮೊದಲು ವಿಶ್ವದ ವಾರ್ಷಿಕ ಟಾಪ್ ಟೆನ್ ಛಾಯಾ ಚಿತ್ರಗಾರ ಮತ್ತು ಪ್ರದರ್ಶನಗಾರರಾಗಿ ಅರ್ಹತೆ ಹೊಂದಿರಬೇಕಾಗುತ್ತದೆ. ಜಿನೇಶ್ ಪ್ರಸಾದ್ ಅವರು ಸತತವಾಗಿ ಮೂರು ವರ್ಷಗಳಿಂದ ಟಾಪ್ ಟೆನ್ ಛಾಯಾಚಿತ್ರ ಪ್ರದರ್ಶನಗಾರರ ಪಟ್ಟಿಯಲ್ಲಿ ಆಯ್ಕೆಯಾಗಿದ್ದರು. ವರ್ಷದಲ್ಲಿ ೧೨ ಸ್ಪರ್ಧೆಗಳಲ್ಲಿ ಸತತವಾಗಿ ಅತಿ ಹೆಚ್ಚಿನ ಸಂಖ್ಯೆಯ ಛಾಯಚಿತ್ರಗಳು ಅವಾರ್ಡ್ ವಿಜೇತರಾಗಿ ಛಾಯಾಚಿತ್ರಗಳು ಪ್ರದರ್ಶನಗೊಂಡಿರಬೇಕಾಗಿರುತ್ತದೆ.
ಜಿನೇಶ್ ಪ್ರಸಾದ್ ಅವರು ಸತತ ಮೂರು ವರುಷಗಳಿಂದ ಈ ಎಲ್ಲಾ ಅರ್ಹತೆಗಳನ್ನು ಗಳಿಸಿದ್ದು ಈ ಬಾರಿ ಅಂದರೆ ೨೦೨೩ನೇ ಸಾಲಿನ ಗೋಲ ಆಫ್ ಗೋಲ್ಡನ್ ಮೆಡಲ್ ಅವಾರ್ಡ್ ಪದಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಛಾಯಾಚಿತ್ರಗಳು ಸೈಪ್ರೆಸ್, ಸಿಂಗಾಪುರ್, ರಷ್ಯಾ, ಉಕ್ರೇನ್, ಬೋಸ್ನಿಯಾ, ಗ್ರೀಸ್ ಮಲೇಶಿಯಾ ರೊಮೇನಿಯಾ ಮುಂತಾದ ಹಲವು ದೇಶಗಳಲ್ಲಿ ಈ ಮೊದಲು ಪ್ರದರ್ಶನಗೊಂಡಿದೆ. ಅಷ್ಟೇ ಅಲ್ಲದೆ ಭಾರತ ದೇಶದ ಇಂಡಿಯನ್ ಫೋಟೋಗ್ರಾಫಿಕ್ ಫೆಡರೇಶನ್ ಇಲ್ಲಿಯೂ ಸತತ ಎರಡು ವರ್ಷಗಳಿಂದ ಟಾಪ್ ೫ ಬೆಸ್ಟ್ ಫೋಟೋಗ್ರಾಫರ್ ಆಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ನಡೆಸುವ ೨೦೨೩ರ ಚಿತ್ರಾಂಜಲಿ ಪ್ರಶಸ್ತಿ ಮತ್ತು ಒಂದು ಲಕ್ಷ ರೂಪಾಯಿಯ ವಿಜೇತರಾಗಿದ್ದರು. ಬೆಂಗಳೂರಿನ ಯೂತ್ ಫೋಟೋಗ್ರಾಫಿಕ್ ಸೊಸೈಟಿ ಇದರ ಸದಸ್ಯರಾಗಿದ್ದು ದೇಶ ವಿದೇಶಗಳ ಹಲವು ಛಾಯಾಚಿತ್ರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಳೆದ ೩೦ ವರ್ಷಗಳಿಂದ ಛಾಯಾಚಿತ್ರಕ್ಕಾಗಿ ದೇಶದ ಹೆಚ್ಚಿನ ಭಾಗಗಳಲ್ಲಿ ಸುತ್ತಾಡಿ ತೆಗೆದ ಅತ್ಯಪೂರ್ವ ಛಾಯಾಚಿತ್ರಗಳ ಬೃಹತ್ ಸಂಗ್ರಹವೇ ಇವರ ಬಳಿಯಲ್ಲಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶ ನೆಲ್ಲಿಕಾರ್ ನಿಂದ ವೃತ್ತಿ ಆರಂಭಿಸಿ ಛಾಯಾಚಿತ್ರ ಕ್ಷೇತ್ರಕ್ಕೆ ತನ್ನದೇ ಆದ ಅಪೂರ್ವ ಕೊಡುಗೆಯನ್ನು ಕೊಟ್ಟಿದ್ದಾರೆ.