ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆಯಲ್ಲಿ 11 ವರ್ಷ ಕಾಲ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಂಚಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಕಚೇರಿ 12ನೇ ವರ್ಷದ ಶುಭಾವಸರದಲ್ಲಿ ಸ್ವಂತ ಕಟ್ಟಡಕ್ಕೆ ವರ್ಗಾವಣೆಗೊಳ್ಳುತ್ತಿದೆ. ಜನವರಿ 22ರಂದು ಶಾಸಕ ಉಮಾನಾಥ ಕೋಟ್ಯಾನ್ ರಿಂದ ಉದ್ಘಾಟನೆಗೊಳ್ಳಲಿರುವ ಸ್ವಂತ ಕಟ್ಟಡದ ಕಚೇರಿಯಲ್ಲಿ ಮೂಡುಬಿದಿರೆ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಸುಮಾರು 2,200ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿರುವ ಸೊಸೈಟಿ 11 ಕೋಟಿ ದುಡಿಯುವ ಬಂಡವಾಳದೊಂದಿಗೆ ಸಾರ್ವಜನಿಕ ಉಪಯೋಗಿ ಕಾರ್ಯಗಳನ್ನು ಮಾಡುತ್ತಿದೆ. 15 ಲಕ್ಷದಷ್ಟು ಹಣದಿಂದ 250ಕ್ಕೂ ಹೆಚ್ಚು ಜನರಿಗೆ ಅನಾರೋಗ್ಯ, ವಿದ್ಯಾಭ್ಯಾಸ, ಮನೆ ನಿರ್ಮಾಣ, ಶೌಚಾಲಯ ಇತ್ಯಾದಿಗಳಿಗೆ ಸಹಾಯವನ್ನು ಒದಗಿಸುವ ಮೂಲಕ ಜನರ ಅಭಿವೃದ್ಧಿಯನ್ನೂ ಕೈಗೊಂಡಿದೆ. ಸಾರ್ವಜನಿಕರ ಠೇವಣಿಗೆ ಅರ್ಧ ಶೇಕಡ ಹೆಚ್ಚುವರಿ ಬಡ್ಡಿ ನೀಡುತ್ತಿದೆ. ಅದರಲ್ಲೂ ದಿವ್ಯಾಂಗರು, ಸೈನಿಕರು, ಸಂಘ ಸಂಸ್ಥೆಗಳ ಠೇವಣಿಗೆ ಒಂದು ಶೇಕಡ ಹೆಚ್ಚುವರಿ ಬಡ್ಡಿಯನ್ನು ನೀಡಿ ಸಲಹುತಿದೆ. ಸದಸ್ಯರ ಸಾಲ ಮರುಪಾವತಿ ಆಗದೆ ತೊಂದರೆಯಲ್ಲಿ ಸಿಲುಕಿ ಕೊಂಡಲ್ಲಿ ಡಿ ಆರ್ ಫಂಡ್ ನಿಂದ ತುಂಬಿಸುವ ಪ್ರಯತ್ನವನ್ನು ಮಾಡಲಾಗಿದೆ. ನಿತ್ಯ ನಿಧಿಯಲ್ಲಿ 50,000 ತೊಡಗಿಸಿದ ಸದಸ್ಯರಿಗೆ 3 ಪಟ್ಟು ಹೆಚ್ಚುವರಿ ನಿಧಿಯನ್ನು ಸಾಲವಾಗಿ ಒದಗಿಸಿ ವ್ಯವಹಾರ ಹಾಗೂ ಉಳಿತಾಯಕ್ಕೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ಸೊಸೈಟಿಯ ಅಧ್ಯಕ್ಷ ರಂಜಿತ್ ಪೂಜಾರಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಹಕಾರಿಯಲ್ಲಿ 12 ಮಂದಿ ನಿರ್ದೇಶಕರಿದ್ದು ಐದು ಮಂದಿ ಸಿಬ್ಬಂದಿಗಳು, ನಾಲ್ಕು ಮಂದಿ ನಿತ್ಯ ನಿಧಿ ಸಂಗ್ರಹಕರು ಇದ್ದು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯನ್ನು ಪ್ರಸ್ತುತ ಹೊಂದಿರುತ್ತದೆ. 100 ಸ್ವಸಹಾಯ ಸಂಘಗಳು ಸಹಕಾರಿಯಲ್ಲಿ ಸೇರಿಕೊಂಡಿದ್ದು ಸದಸ್ಯರಿಗೆ 12 ಶೇಕಡ ಡಿವಿಡೆಂಡ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಸುರೇಶ್ ಪೂಜಾರಿ, ಗೋಪಾಲ್ ಶೆಟ್ಟಿಗಾರ್, ರಾಜೇಂದ್ರ ಬಿ, ರವೀಂದ್ರ ಕರ್ಕೆರ, ಹಾಗೂ ನಾಗೇಶ್ ನಾಯ್ಕ ಹಾಜರಿದ್ದರು. ನಿರ್ದೇಶಕ ರಮೇಶ್ ಎಸ್ ಶೆಟ್ಟಿ ವಂದಿಸಿದರು.

