ಶಿರ್ವ: ಸುಮಾರು 7 ಕೋ. ರೂ. ವೆಚ್ಚದಲ್ಲಿ ಜೀರ್ಣೋದ್ದಾರಗೊಂಡ ಮೂಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾ ಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶಿಲಾಮಯ ಗರ್ಭಗೃಹದ ನೂತನ ದೇಗುಲ ಸಮರ್ಪಣೆ, ಪುನಃಪ್ರತಿಷ್ಠಾ ಅಷ್ಟಬಂಧ, ಅಷ್ಟೋತ್ತರ ಸಹಸ್ರಕಲಶ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಹಸುರುವಾಣಿ ಹೊರೆ ಕಾಣಿಕೆ ಮೆರವಣಿಗೆಯು ಎ. 19 ರಂದು ಸಂಜೆ 4ಕ್ಕೆ ಬೆಳ್ಳೆಯ ಗೀತಾ ಮಂದಿರದಿಂದ ಮೂಡುಬೆಳ್ಳೆ ದೇವಸ್ಥಾನದವರೆಗೆ ನಡೆಯಲಿದೆ. ಬೆಳಗ್ಗೆ 8 ರಿಂದ ದೇಗುಲದಲ್ಲಿ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಸಗ್ರಿ ಹರಿದಾಸ್ ಐತಾಳ್ ಅವರ ನೇತೃತ್ವದಲ್ಲಿ ಪಂಚಗವ್ಯ ಪುಣ್ಯಾಹವಾಚನ, ದೇವನಾಂದಿ, ಅರಣೀಮಥನ, ಬ್ರಹ್ಮಕೂರ್ಚ ಹೋಮ, ಕಂಕಣಬಂಧ, ಬಿಂಬಶುದ್ದಿ, ಮಹಾಪೂಜೆ, ವೇದತ್ರಯ ಪಾರಾಯಣ ನಡೆಯಲಿದ್ದು, ಸಂಜೆ 5ರಿಂದ ಮಂಟಪ ಸಂಸ್ಕಾರ ಹಾಗೂ ರಾತ್ರಿ ಪೂಜೆ ನಡೆಯಲಿದೆ. ಮೂಡುಬೆಳ್ಳೆಯ ಪಾಣಾರ ಸಂಘ, ಉಮೇಶ್ ನಾಯಕ್ ಮೂಡುಬೆಳ್ಳೆ ಬೆಳ್ಳೆ ಕಟ್ಟಿಂಗೇರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಗ್ರಾಮಸ್ಥರು ಮತ್ತು ಭಕ್ತರ ಸಹಕಾರದೊಂದಿಗೆ ವಿವಿಧ ವಾದ್ಯ ಘೋಷಗಳೊಂದಿಗೆ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಕಂಬಳ ಕೋಣ, ನಂದಿ, ಕೀಲು ಕುದುರೆ, ಕುಣಿತ ಭಜನೆ, ಕೇರಳ ಚೆಂಡೆ, ಹುಲಿವೇಷ, ಬ್ಯಾಂಡ್, ಮಂಗಳವಾದ್ಯ ಹಾಗೂ ಪೂರ್ಣ ಕುಂಭ ಇರಲಿದೆ ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.