ಉಪ್ಪಿನಂಗಡಿ: ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗುವಿನೊಂದಿಗೆ ಪರಾರಿಯಾಗಿದ್ದಾರೆ. ಕೌಕ್ರಾಡಿ ಗ್ರಾಮದ ಕಟ್ಟೆ ಮಜಲು ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ 26ರ ಹರೆಯದ ರೀಮಾ ಸೋಂಕರ್ ಮತ್ತು 1 ವರ್ಷದ ಮಗು ರಿಯಾ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾಗಿರುವ ಮಹಿಳೆಯ ಪತಿ ಸೋನು ಸೋಂಕರ್ ಇಂಟಿರಿಯರ್ ಡೆಕೊರೇಟರ್ ಆಗಿದ್ದು, ಕೌಕ್ರಾಡಿಯಲ್ಲಿ ಕೃಷ್ಣಪ್ಪ ಎಂಬವರ ಮನೆಯಲ್ಲಿ ಬಾಡಿಗೆಗಿದ್ದರು. ಉತ್ತರ ಪ್ರದೇಶದ ಅಜಂಗಢ ನಿವಾಸಿಯಾಗಿರುವ ಸೋನು ಏ.22ರಂದು ಬೆಳಗ್ಗೆ ಕೆಲಸಕ್ಕೆಂದು ತೆರಳಿದ್ದು, ಸಂಜೆ ಮರಳಿ ಮನೆಗೆ ಬರುವಾಗ ಮನೆಯ ಬಾಗಿಲಿಗೆ ಬೀಗ ಹಾಕಿರುವುದು ಕಂಡು ಬಂದಿದೆದ. ಅಲ್ಲದೆ, ಪತ್ನಿ ಹಾಗೂ ಮಗು ನಾಪತ್ತೆಯಾಗಿರುವುದೂ ಕಂಡು ಬಂತು. ಈ ಹಿನ್ನೆಲೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.