ಪೆರು: ಸುಮಾರು 22 ವರ್ಷಗಳ ಹಿಂದೆ ನಡೆದ ಭೀಕರ ಹಿಮಪಾತ ದುರಂತದಲ್ಲಿ ಹಿಮದಡಿ ಕಣ್ಮರೆಯಾಗಿದ್ದ ಪರ್ವತಾರೋಹಿಯೊಬ್ಬರ ಶವ ಈಗ ಪತ್ತೆಯಾಗಿದೆ. ಪೆರುವಿನಲ್ಲಿ ಸಂಭವಿಸಿದ್ದ ಹಿಮಪಾತದಲ್ಲಿ ಕಳೆದುಹೋಗಿದ್ದ ಪರ್ವತಾರೋಹಿಯ ಶವ ಮಮ್ಮಿ ರೀತಿ ಕಾಪಾಡಲ್ಪಟ್ಟು, ಇದೀಗ ಮಂಜು ಕರಗಿರುವ ಹಿನ್ನೆಲೆಯಲ್ಲಿ 22 ವರ್ಷಗಳ ಬಳಿಕ ಪತ್ತೆಯಾಗಿದೆ.
2002ರ ಜೂನ್‌ನಲ್ಲಿ ಪರ್ವತಾರೋಹಿ ವಿಲಿಯಮ್ಸ್ ಸ್ಟಾಂಪ್ಲ್ (59) ಹಿಮಪಾತದಿಂದಾಗಿ ಜೀವಂತವಾಗಿ ಸಮಾಧಿಯಾಗಿದ್ದರು. 22,000 ಅಡಿ ಎತ್ತರ ಪರ್ವತ ಪ್ರದೇಶದಲ್ಲಿ ಈ ದುರಂತ ಸಂಭವಿಸಿತ್ತು. ರಕ್ಷಣಾ ತಂಡ ಶೋಧ ಕಾರ್ಯ ನಡೆಸಿದ್ದರೂ ಶವಪತ್ತೆಯಾಗಿರಲಿಲ್ಲ. ಆದರೆ ಈಗ ಕೊನೆಗೂ 22 ವರ್ಷಗಳ ಬಳಿಕ ಆಂಡಿಸ್‌ನ ಕಾರ್ಡಿಲ್ಲೆರಾ ಬ್ಲಾಂಕಾ ಪರ್ವತ ಶ್ರೇಣಿಯಲ್ಲಿ ಮಂಜುಗಡ್ಡೆ ಕರಗುವ ಮೂಲಕ ಪರ್ವತಾರೋಹಿಯ ಶವ ಪತ್ತೆಯಾಗಿದೆ ಎಂದು ಪೆರು ಪೊಲೀಸ್ ಮೂಲಗಳು ತಿಳಿಸಿವೆ.
ಮಂಜುಗಡ್ಡೆಯಿಂದಾಗಿ ಸ್ಟಾಂಪ್ಲ್ ಮೃತದೇಹ ಕೊಳೆಯದೆ ಮಮ್ಮಿ ರೀತಿ ಸಂರಕ್ಷಿಸಲ್ಪಟ್ಟಿದೆ. ಬಟ್ಟೆಯೂ ಹಾಳಾಗಿರಲಿಲ್ಲ. ಪ್ಯಾಂಟ್ ಕಿಸೆಯಲ್ಲಿದ್ದ ಪಾಸ್‌ಪೋರ್ಟ್ ಮೂಲಕ ಗುರುತು ಪತ್ತೆಗೆ ಸಾಧ್ಯವಾಯಿತು ಎಂದು ಪೆರು ಪೊಲೀಸರು ತಿಳಿಸಿದ್ದಾರೆ.

