ಮಂಗಳೂರು: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ(ಆರ್ಡಬ್ಲ್ಯುಬಿಸಿಐಎಸ್)ಯಡಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಲಕ್ಷಾಂತರ ಮಂದಿ ಅರ್ಹ ರೈತರಿಗೆ ಈ ಬಾರಿ ವಿಮಾ ಹಣ ಪಾವತಿ ವಿಳಂಬವಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಭೆ ನಡೆಸಿ, ತತಕ್ಷಣವೇ ಬೆಳೆ ವಿಮಾ ಮೊತ್ತ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ವಿಮಾ ಕಂಪೆನಿಗಳು ಅರ್ಹ ರೈತರಿಗೆ ಆರ್ಡಬ್ಲ್ಯುಬಿಸಿಐಎಸ್ ಯೋಜನೆಯಡಿ ವಿಮಾ ಮೊತ್ತ ಪಾವತಿಸುವುದಕ್ಕೆ ಸಾಕಷ್ಟು ವಿಳಂಬವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಂಸದ ಕ್ಯಾ. ಚೌಟ ಅವರು ಕಳೆದ ವಾರ ತೋಟಗಾರಿಕ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿಳಂಬಕ್ಕೆ ಕಾರಣಗಳನ್ನು ಪರಾಮರ್ಶಿಸಿದ್ದರು. ಆ ಮೂಲಕ ತುರ್ತಾಗಿ ವಿಮಾ ಮೊತ್ತ ಬಿಡುಗಡೆಗೊಳಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೂ ಸೂಚಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಜಾರಿಗೊಳಿಸಿರುವ ಈ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ವಿಮಾ ಕಂಪೆನಿಗಳು ಅರ್ಹ ರೈತರ ಖಾತೆಗಳಿಗೆ ವಿಮಾ ಮೊತ್ತವನ್ನು ಜಮೆ ಮಾಡುತ್ತವೆ. ಆದರೆ ಮಳೆ ಜಾಸ್ತಿಯಾಗಿರುವ ಕಾರಣ ಹವಾಮಾನ ಆಧಾರಿತ ಬೆಳೆ ನಾಶದ ವರದಿ ಸಲ್ಲಿಕೆಯ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗಿದೆ ಎಂಬುವುದಾಗಿ ಇಲಾಖಾಧಿಕಾರಿಗಳು ಹೇಳಿದ್ದಾರೆ. ಆದರೆ ನವೆಂಬರ್ ಮುಗಿದು ಡಿಸೆಂಬರ್ ತಿಂಗಳು ಆರಂಭಗೊಂಡಿದ್ದರೂ ಇನ್ನೂ ವಿಮಾ ಕಂಪೆನಿಗಳಿಂದ ರೈತರ ಖಾತೆಗಳಿಗೆ ಹಣ ಜಮೆ ಆಗದೆ ಇರುವುದರಿಂದ ಫಲಾನುಭವಿಗಳಿಗೆ ತೀವ್ರ ಆರ್ಥಿಕ ತೊಂದರೆಗೊಳಗಾಗಿದ್ದಾರೆ. ಹೀಗಾಗಿ ಅದಷ್ಟು ರೈತರಿಗೆ ಅನುಕೂಲವಾಗುವಂತೆ ವಿಮಾ ಮೊತ್ತ ಬಿಡುಗಡೆ ಮಾಡಲು ಫಾಲೋ ಆಪ್ ಮಾಡಬೇಕು ಎಂದು ಸಭೆಯಲ್ಲಿ ಕ್ಯಾ. ಚೌಟ ನಿರ್ದೇಶಿಸಿದ್ದಾರೆ.

