ನವದೆಹಲಿ: ಕಡಿಮೆ ಮುಖಬೆಲೆಯ ನೋಟುಗಳ ತೀವ್ರ ಕೊರತೆಯಿಂದಾಗಿ ಬಡವರಿಗೆ ತೊಂದರೆಗಳಾಗುತ್ತಿವೆ. ಹೀಗಾಗಿರ 10 ರೂ., 20 ರೂ., 50 ರೂ. ಮುಖಬೆಲೆಯ ನೋಟುಗಳನ್ನು ಹೆಚ್ಚಾಗಿ ಮುದ್ರಿಸಲು ಆರ್‌ಬಿಐಗೆ ನಿರ್ದೇಶಿಸುವಂತೆ ಆಗ್ರಹಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕಾಂಗ್ರೆಸ್ ಸಚೇತಕ ಮಾಣಿಕಂ ಟಾಗೋರ್ ಪತ್ರ ಬರೆದಿದ್ದಾರೆ.
ಕಡಿಮೆ ಮುಖಬೆಲೆಯ ನೋಟುಗಳ ಕೊರತೆಯು ಗ್ರಾಮೀಣ ಹಾಗೂ ನಗರ ಪ್ರದೇಶದ ಬಡವರ ಮೇಲೆ ಪರಿಣಾಮ ಬೀರುತ್ತಿದೆ. ಯುಪಿಐ ಮತ್ತು ನಗದು ರಹಿತ ವಹಿವಾಟುಗಳನ್ನು ಉತ್ತೇಜಿಸಲು ಆರ್‌ಬಿಐ ಕಡಿಮೆ ಮುಖಬೆಲೆಯ ನೋಟುಗಳ ಮುದ್ರಣ ನಿಲ್ಲಿಸಿದೆ ಎಂದು ವರದಿಯಾಗಿರುವ ಬಗ್ಗೆ ಟಾಗೋರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಡಿಜಿಟಲ್ ವ್ಯವಸ್ಥೆಗೆ ಒಗ್ಗಿಕೊಳ್ಳದ ಜನರ ದೈನಂದಿನ ವಹಿವಾಟುಗಳ ಮೇಲೆ ಪರಿಣಾಮ ಬೀಳುತ್ತಿದೆ. ವಿಶೇಷವಾಗಿ ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು, ನಗರು ವಹಿವಾಟಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ದಿನಗೂಲಿ ನೌಕರರಿಗೆ ಹೆಚ್ಚು ತೊಂದರೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.