ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ರಿಟೇಲ್ ಲಿಮಿಟೆಡ್ ದೇಶಾದ್ಯಂತ ಹಲವು ಮಳಿಗೆ ಹೊಂದಿದೆ. ರಿಲಯನ್ಸ್ ಟ್ರೆಂಡ್, ಡಿಜಿಟಲ್, ಫ್ರೆಶ್, ಸೆಂಟ್ರೋ ಸೇರಿದಂತೆ ಹಲವು ಮಳಿಗೆ ಹೊಂದಿದೆ. ಪ್ರಮುಖ ನಗರ, ಪಟ್ಟಣ ಸೇರಿದಂತೆ ಟೈಯರ್ 2, ಟೈಯರ್ 3 ನಗರಗಳಲ್ಲೂ ಈ ಸ್ಟೋರ್ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಪ್ರತಿ ದಿನ ರಿಲಯನ್ಸ್ ಕೋಟಿ ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ಇದೀಗ ರಿಲಯನ್ಸ್ ರಿಟೇಲ್ ಲಿಮಿಟೆಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಿಲಯನ್ಸ್ ಸೆಂಟ್ರೋ ಮಳಿಗೆಗಳನ್ನು ತಾತ್ಕಾಲಿಕವಾಗಿ ಸ್ಥತಗಿತಗೊಳಿಸಲು ಮುಕೇಶ್ ಅಂಬಾನಿ ನಿರ್ಧರಿಸಿದ್ದಾರೆ. ದೇಶಾದ್ಯಂತ ಇರುವ 80 ಸೆಂಟ್ರೋ ಸ್ಟೋರ್ ಸ್ಥಗಿತಗೊಳ್ಳುತ್ತಿದೆ.
ಕಾನೂನು ಹೋರಾಟ, ವಾದ ವಿವಾದಗಳ ಬಳಿಕ ಫ್ಯೂಚರ್ ಗ್ರೂಪ್ ಕಂಪನಿಯನ್ನು ರಿಲಯನ್ಸ್ ತೆಕ್ಕೆಗೆ ಪಡೆದುಕೊಂಡಿತ್ತು. 2022ರ ಸೆಪ್ಟೆಂಬರ್ ತಿಂಗಳಲ್ಲಿ ಫ್ಯೂಚರ್ ಗ್ರೂಪ್ ಸಂಸ್ಥೆಯ ಸ್ಟೋರ್‌ಗಳನ್ನು ರಿಲಯನ್ಸ್ ಸೆಂಟ್ರೋ ಎಂದು ಮರುನಾಮಕರಣ ಮಾಡಿತ್ತು. ಕಳೆದೆರಡು ವರ್ಷದಿಂದ ದೇಶದಲ್ಲಿ 80 ರಿಲಯನ್ಸ್ ಸೆಂಟ್ರೋ ಸ್ಟೋರ್ ಕಾರ್ಯನಿರ್ವಹಿಸುತ್ತಿದೆ. ಇದೀಗ ಈ ಎಲ್ಲಾ ಸ್ಟೋರ್‌ಗಳನ್ನು ರಿಲಯನ್ಸ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದೆ.
ರಿಲಯಯನ್ಸ್ ರಿಟೇಲ್ ಈ ನಿರ್ಧಾರ ತೆಗೆದುಕೊಳ್ಳಲು ಕೆಲ ಕಾರಣಗಳಿವೆ. ಪ್ರಮುಖವಾಗಿ ಫ್ಯೂಚರ್ ಗ್ರೂಪ್ ಕಂಪನಿ ರಿಲಯನ್ಸ್ ಜೊತೆ ವಿಲೀನವಾದಾಗ ಫ್ಯೂಚರ್ ಗ್ರೂಪ್ ಕಂಪನಿಗಳ ಸ್ಟೋರ್ ರಿಲಯನ್ಸ್ ಸೆಂಟ್ರೋ ಆಗಿ ಬದಲಾಗಿತ್ತು. ಆದರೆ ಮಳಿಗೆ ಒಳಗಿನ ವಿನ್ಯಾಸ ಸೇರಿದಂತೆ ಇತರ ಅರೇಂಜ್ಮೆಂಟ್‌ನಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಇದೀಗ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರಿಲಯನ್ಸ್ ಸೆಂಟ್ರೋದ ಎಲ್ಲಾ ಮಳಿಗೆಗಳನ್ನು ನವೀಕರಣ ಮಾಡಲು ರಿಲಯನ್ಸ್ ಮುಂದಾಗಿದೆ ಎಂದು ಎಕಾನಿಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಇಷ್ಟೇ ಅಲ್ಲ ನವೀಕರಣ ಬಳಿಕ ರಿಲಯನ್ಸ್ ಸೆಂಟ್ರೋ ಮಳಿಗೆಗಳೂ ರಿಲಯನ್ಸ್ ರಿಟೇಲ್ ಬ್ರ್ಯಾಂಡ್ ಮೂಲಕವೇ ಕಾರ್ಯನಿರ್ವಹಿಸಲಿದೆ. ಫ್ಯೂಚರ್ ಗ್ರೂಪ್‌ನ ಯಾವುದೇ ಕುರುಹುಗಳು ಇರುವುದಿಲ್ಲ. ಎಲ್ಲವೂ ರಿಲಯನ್ಸ್ ಟ್ರೆಂಡ್, ರಿಲಯನ್ಸ್ ಡಿಜಿಟಲ್, ರಿಲಯನ್ಸ್ ಫ್ರೆಸ್ ಸೇರಿದಂತೆ ರಿಲಯನ್ಸ್ ರಿಟೇಲ್ ಲಿಮಿಟೆಡ್ ನೇರ ಬ್ರ್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಎಕಾನಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ರಿಲಯನ್ಸ್ ಸೆಂಟ್ರೋ ಮಳಿಗೆಗಳಲ್ಲಿ ರಿಲಯನ್ಸ್ ಲೋಗೋ ಹಾಗೂ ಸೆಂಟ್ರೋ ಅನ್ನೋ ಹೆಸರಿದೆ. ಇದು ರಿಲಯನ್ಸ್ ಬ್ರ್ಯಾಂಡ್ ಅನ್ನೋದು ಕೆಲವರಿಗೆ ಮಾತ್ರ ತಿಳಿಯುತ್ತಿದೆ. ಬೇರೆ ಬೇರೆ ಗ್ರೂಪ್ ಅಡಿಯಲ್ಲಿ ಕಾರ್ಯನಿರ್ವಹಣೆ ಬ್ರ್ಯಾಂಡಿಂಗ್ ಹಾಗೂ ಪ್ರಮೋಶನ್‌ಗೂ ಸವಾಲಾಗಿದೆ. ಹೀಗಾಗಿ ಒಂದೇ ಬ್ರ್ಯಾಂಡ್ ಅಡಿಯಲ್ಲಿ ಸುಲಭವಾಗಿ ನಿರ್ವಹಣೆ ಮಾಡಲು ಸಾಧ್ಯವಿದೆ ಎಂದು ಇದೀಗ ಮಹತ್ವದ ಬದಲಾವಣೆಗೆ ರಿಲಯನ್ಸ್ ರಿಟೇಲ್ ಮುಂದಾಗಿದೆ.
ಭಾರತೀಯ ರಿಟೇಲ್ ಮಾರುಕಟ್ಟೆಯಲ್ಲಿ ರಿಲಯನ್ಸ್ ಅತೀ ದೊಡ್ಡ ಸ್ಟೋರ್ ಆಗಿ ಹೊರಹೊಮ್ಮಿದೆ. ಆದರೆ ಕೋವಿಡ್ 19ರ ಬಳಿಕ ಬಹುತೇಕ ರಿಟೇಲ್ ಸ್ಟೋರ್ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಕೇವಲ ಶೇಕಡಾ 4 ರಷ್ಟು ಪ್ರಗತಿ ಸಾಧಿಸಿದೆ. ಇಷ್ಟೇ ಅಲ್ಲ ಹಲವು ಸಣ್ಣ ರಿಟೇಲ್ ಮಾರುಕಟ್ಟೆ ಬಂದ್ ಆಗಿದೆ. ಆದರೆ ರಿಲಯನ್ಸ್ ಪ್ರಮುಖ ರಿಟೇಲ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಹೀಗಾಗಿ ಒಂದೇ ಬ್ರ್ಯಾಂಡ್ ಅಡಿ ಫ್ಯೂಚರ್ ಗ್ರೂಪ್ ಸ್ಟೋರ್‌ಗಳನ್ನು ನವೀಕರಿಸಿ ರೀ ಬ್ರ್ಯಾಂಡ್ ಮಾಡಲು ರಿಲಯನ್ಸ್ ಬಹುದೊಡ್ಡ ಪ್ಲಾನ್ ಮಾಡಿದೆ.
ಹೊಸ ವಿನ್ಯಾಸ, ಹೊಸ ಅವತಾರದಲ್ಲಿ ಇದೀಗ ರಿಲಯನ್ಸ್ ಸೆಂಟ್ರೋ ಮಳಿಗೆ ಕಾರ್ಯಾರಂಭಿಸುವ ಸಾಧ್ಯತೆ. ರಿಲಯನ್ಸ್ ಜೊತೆ ಒಪ್ಪಂದ ಮಾಡಿಕೊಂಡಿರುವ ಬ್ರ್ಯಾಂಡ್‌ಗಳಿಗೆ ಮತ್ತಷ್ಟು ಮಾರುಕಟ್ಟೆ ಸಿಗಲಿದೆ. ಇಷ್ಟೇ ಅಲ್ಲ ರಿಲಯನ್ಸ್ ಸುಲಭವಾಗಿ ಆದಾಯ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.