ಮುಲ್ಕಿ: ಡ್ರೀಮ್ ಡೀಲ್ ಸೀಸನ್-2ರಲ್ಲಿ 3ಕಾರ್ಡ್ ಹೊಂದಿದ್ದ ಮುಲ್ಕಿ ಗೇರುಕಟ್ಟೆ ಮುನ್ನ ಮಂಜಿಲ್ ನಿವಾಸಿ ಮಹಮ್ಮದ್ ಇರ್ಫಾನ್‌ರವರು ಡ್ರೀಮ್ ಡೀಲ್ ಮೋಸಗಳನ್ನು ಇತರರ ಜತೆಗೆ ಹಂಚಿಕೊಂಡದ್ದಕ್ಕೆ ಡ್ರೀಮ್ ಡೀಲ್ ಸಂಸ್ಥೆಯು ಹೆಜಮಾಡಿ ಗೂಂಡಾ ಗುಲಾಂ ಮೊಹಮ್ಮದ್ ಮೂಲಕ ತನಗೆ ಜೀವ ಬೆದರಿಕೆ ಒಡ್ಡಿದ್ದಾಗಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಮೂಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ಶನಿವಾರ ಲಿಖಿತ ಹೇಳಿಕೆಯೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಮಹಮ್ಮದ್ ಇರ್ಪಾನ್ ಮಾಹಿತಿ ನೀಡಿ ಡ್ರೀಮ್ ಡೀಲ್ ಸೀಸನ್ 2ರಲ್ಲಿ ನಾನು 3 ಕಾರ್ಡ್ ಹೊಂದಿದ್ದಲ್ಲದೆ ನೂರಾರು ಜನರನ್ನು ಸದಸ್ಯರನ್ನಾಗಿ ಸೇರಿಸಿದ್ದೇನೆ. ಬಳಿಕ ಸಂಸ್ಥೆಯಲ್ಲಿ ಆಗುತ್ತಿರುವ ಮೋಸದ ಬಗ್ಗೆ ನ್ಯಾಯಕ್ಕಾಗಿ ಧ್ವನಿ ಎತ್ತಿದೆ. ಈ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಕ್ಕೆ ಡ್ರೀಮ್ ಡೀಲ್ ಕಾರ್ಯಕರ್ತ ಅಶ್ರಫ್ ಎಂಬವರು ನನ್ನ ಮನವೊಲಿಸಿ ಸೂಕ್ತ ಕ್ರಮದ ಭರವಸೆ ನೀಡಿದ್ದರು.
ಬಳಿಕ ಪಾತಕ ಲೋಕದ ನಂಟು ಹೊಂದಿರುವ ಗುಲಾಂ ಮೊಹಮ್ಮದ್ ಹೆಜಮಾಡಿಯವರ ಮೂಲಕ ನನಗೆ ಜೀವ ಬೆದರಿಕೆ ಹಾಕಿರುತ್ತಾರೆ. ಅಷ್ಟೇ ಅಲ್ಲದೆ ಪಣಂಬೂರು ಎಸಿಪಿ ನನ್ನ ಆತ್ಮೀಯರು. ಅವರ ಮೂಲಕ ನಿನ್ನ ಮೇಲೆ ಸುಳ್ಳು ಕೇಸು ಹಾಕಿಸಿ ನಿನ್ನನ್ನು ಮುಗಿಸಿ ಬಿಡುತ್ತೇನೆ ಎಂದು ಗುಲಾಂ ಮೊಹಮ್ಮದ್ ಜೀವ ಬೆದರಿಕೆ ಒಡ್ಡಿದ್ದಾರೆ.
ಹಾಗಾಗಿ ನನಗೆ ಜೀವ ಭಯ ಇದ್ದು ಸೂಕ್ತ ರಕ್ಷಣೆ ನೀಡುವಂತೆ ಈಗಾಗಲೇ ಜಿಲ್ಲಾಧಿಕಾರಿ ಸಹಿತ ವಿವಿಧ ಅಧಿಕಾರಿಗಳಿಗೆ ದೂರು ನೀಡಿದ್ದಾಗಿ ಸುದ್ದಿಗೋಷ್ಠಿಯಲ್ಲಿ ದಾಖಲೆ ಸಮೇತ ತಿಳಿಸಿದ್ದಾರೆ.