ಶಾಲಾ-ಕಾಲೇಜುಗಳು, ಸಾರ್ವಜನಿಕ ಸ್ಥಳ, ಮನೆಯ ಪರಿಸರದಲ್ಲಿ ಗಿಡ-ಮರಗಳನ್ನು ನೆಟ್ಟು ಬೆಳೆಸಿ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಹಸಿರುಗೊಳಿಸುವ ಮೂಲಕ ವಿದ್ಯಾರ್ಥಿಗಳು ಪರಿಸರ ಉಳಿಸುವುದಕ್ಕೆ ಕಾರ್ಯಪ್ರವೃತ್ತರಾಗಬೇಕು, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಯರ್ ಈ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಅಧ್ಯಕ್ಷ ಲಯನ್ ಎನ್ ಸುಧೀರ ಬಾಳಿಗರವರು ಹೇಳಿದರು. ಮೂಲ್ಕಿಯ ವಿಜಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಎನ್.ಸಿ.ಸಿ ಘಟಕ ವಿದ್ಯಾರ್ಥಿಗಳು ಭಾಗವಹಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಕ್ಲಬ್ ಮುಖಾಂತರ ಉಚಿತವಾಗಿ ಕೊಟ್ಟ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.
ಕ್ಲಬ್ ಕಾರ್ಯದರ್ಶಿ ಲಯನ್ ಪುಷ್ಪರಾಜ್ ಚೌಟ ಮಾತನಾಡಿ ಮನುಷ್ಯ ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ. ಇಂತ ಪರಿಸ್ಥಿತಿ ಹೀಗೆ ಮುಂದುವರೆದರೆ ನಮಗೆ ಮಾರಕ, ವಿದ್ಯಾರ್ಥಿಗಳು ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಲು ಬದ್ಧರಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ|ಶ್ರೀಮಣಿ ಶೆಟ್ಟಿ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಹಿತವಚನ ನೀಡಿದರು. ಎನ್.ಸಿ.ಸಿ ಅಧಿಕಾರಿ ರಾಜೇಶ್ ಶೆಟ್ಟಿಗಾರ್ ಸಂಘಟಿಸಿದ ಈ ಕಾರ್ಯಕ್ರಮವನ್ನು ಸೇವಾಯೋಜನಾಧಿಕಾರಿಯಾದ ಅರುಣಾ ಅವರು ನಿರೂಪಿಸಿ ಲಯನ್ಸ್ ಕ್ಲಬ್ ಬಪ್ಪನಾಡು ಸ್ಥಾಪಕಾಧ್ಯಕ್ಷರಾದ ಲಯನ್ ವೆಂಕಟೇಶ್ ಹೆಬ್ಬಾರ್ ಅವರಿಂದ ಕಾಲೇಜಿಗೆ ಪ್ರತಿ ವರ್ಷವೂ ಗಿಡಗಳ ಕೊಡುಗೆ ಸೇರಿದಂತೆ ಕಾಲೇಜಿನ ಹತ್ತು-ಹಲವು ಕಾರ್ಯಕ್ರಮಗಳಿಗೆ ಅವರ ಸಹಕಾರವನ್ನು ಅಭಿನಂದಿಸಿ, ವಂದಿಸಿದರು.