ಮುಲ್ಕಿ: ನಗರ ಪಂಚಾಯತ್ ಮಾಸಿಕ ಸಭೆ ಅಧ್ಯಕ್ಷ ಸತೀಶ್ ಅಂಚನ್ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ನಗರದಲ್ಲಿ ಅನಧಿಕೃತ ಪ್ಲೆಕ್ಸ್ ಗೆ ಕಡಿವಾಣ ಹಾಕುವ ಬಗ್ಗೆ ಚರ್ಚೆ ನಡೆದು ಸೋಮವಾರದ ಒಳಗೆ ಅನಧಿಕೃತ ಪ್ಲೆಕ್ಸ್ ತೆರವು ಗೊಳಿಸಲು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೆಸ್ಕಾಂ ಇಲಾಖೆ ಅಧಿಕಾರಿಗಳು ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಸದಸ್ಯ ಪುತ್ತು ಬಾವ ಆರೋಪಿಸಿದರು, ಸದಸ್ಯ ಮಂಜುನಾಥ ಕಂಬಾರ ಮಾತನಾಡಿ ಲಿಂಗಪ್ಪಯ್ಯ ಕಾಡಿನಲ್ಲಿ ಕೆಲ ಕಡೆ ಗ್ರಾಹಕರಿಗೆ ವಿಧ್ಯುತ್ ಮೀಟರ್ ರೀಡಿಂಗ್ ವಿಧಾನ ಗತಿಯಲ್ಲಿದೆ ಎಂದು ಹೇಳಿ 2,000 ಅಥವಾ 3000 ದಂಡ ಕಟ್ಟಲು ಮೆಸ್ಕಾಂ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೆಎಸ್ ರಾವ್ನಗರದ ಉತ್ತರ ಕರ್ನಾಟಕದ ಕೆಲ ನಿವಾಸಿಗಳಿಗೆ ರೇಷನ್ ಕಾರ್ಡ್ ನೀಡುವ ಬಗ್ಗೆ ಭೀಮಾಶಂಕರ್ ಉಪತಹಶಿಲ್ದಾರ್ ದಿಲೀಪ್ ರೋಡ್ಕರ್ ರವರನ್ನು ಒತ್ತಾಯಿಸಿದರು.
ನಗರ ಪಂಚಾಯತ್ ವ್ಯಾಪ್ತಿಯ ಚಿತ್ರಾಪು ಪಡುಬೈಲು ಪ್ರದೇಶದಲ್ಲಿ ಪಡುಪಣಂಬೂರುಗ್ರಾ.ಪಂ ನ ಅಣೆಕಟ್ಟಿನಿಂದ ಉಪ್ಪು ನೀರು ಸೋರಿಕೆಯಾಗಿ ಕೃಷಿ ಹಾನಿಯಾಗಿದೆ ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ ಎಂದು ಸದಸ್ಯ ಯೋಗೀಶ್ ಕೋಟ್ಯಾನ್ ಹೇಳಿದರು, ಇದಕ್ಕೆ ಸ್ಥಾಯಿ ಸಮಿತಿಯ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಸದಸ್ಯೆ ರಾಧಿಕಾ ಕೋಟ್ಯಾನ್ ಸಹಮತ ವ್ಯಕ್ತಪಡಿಸಿ ಸೂಕ್ತ ಪರಿಹಾರ ಒತ್ತಾಯಿಸಿದರು.
ನ ಪಂ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಚರ್ಚೆ ನಡೆದು ರೂಪಾಯಿ 500 ರವರೆಗೆ ಪ್ರಥಮ ಹಂತದಲ್ಲಿ ದಂಡ ವಿಧಿಸಲು ತೀರ್ಮಾನಿಸಲಾಯಿತು. ನ ಪಂ ವ್ಯಾಪ್ತಿಯ ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿಗೆ ಎಳತ್ತೂರು ಬಳಿ 1.89 ಎಕ್ರೆ ಸ್ಥಳ ಗೊತ್ತು ಮಾಡಿದ್ದು ವಿರೋಧದ ಬಗ್ಗೆ ಸ್ಥಳೀಯರಿಗೆ ಮನವರಿಕೆ ಮಾಡುವುದರ ಜೊತೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಪೊಲೀಸ್ ರಕ್ಷಣೆಯೊಂದಿಗೆ ಕಾಮಗಾರಿ ನಡೆಸಲು ನಿರ್ಧರಿಸಲಾಯಿತು.
ಕೊಕ್ಕರಕಲ್ ಬಳಿ ಫ್ಲ್ಯಾಟ್ ನ ತ್ಯಾಜ್ಯ ನೀರು ಹೆದ್ದಾರಿ ಬದಿಗೆ ಬಿಡುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಲು ಯೋಗೀಶ್ ಕೋಟ್ಯಾನ್ ಆಗ್ರಹಿಸಿದರು. ಮಾರ್ಕೆಟ್ ಪ್ರದೇಶದಲ್ಲಿ ಕೂಡ ತ್ಯಾಜ್ಯ ನೀರು ರಸ್ತೆ ಬದಿಯಲ್ಲಿ ಹರಿಯುತ್ತಿದ್ದು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಅಧ್ಯಕ್ಷರು ಮುಖ್ಯಾ ಧಿಕಾರಿ ಮಧುಕರ್ ರವರಿಗೆ ಸೂಚನೆ ನೀಡಿದರು.
ಪಡುಬೈಲು ಪ್ರದೇಶದಲ್ಲಿ ಕಳ್ಳರ ಹಾವಳಿ ಹಾಗೂ ನದಿ ತೀರದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ನಿಯಂತ್ರಿಸಬೇಕು ಎಂದು ರಾಧಿಕಾ ಕೋಟ್ಯಾನ್ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು ಇದಕ್ಕೆ ಧ್ವನಿಗೂಡಿಸಿದ ವಿಮಲಾ ಪೂಜಾರಿ, ಹರ್ಷರಾಜ ಶೆಟ್ಟಿ ಮಾತನಾಡಿ ಕೆಎಸ್ ರಾವ್ ನಗರ ಕಾರ್ನಾಡು ಪರಿಸರದಲ್ಲಿ ಅಪ್ರಾಪ್ತರು ಬೈಕ್ ಚಲಾಯಿಸುವ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು ನ ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದರ ಹೆಚ್ಚಳದ ಬಗ್ಗೆ ಪಕ್ಷಭೇದ ಮರೆತು ಎಲ್ಲಾ ಸದಸ್ಯರು ವಿರೋಧ ವ್ಯಕ್ತಪಡಿಸಿದರು ಕೆ ಎಸ್ ರಾವ್ ನಗರದಲ್ಲಿ ಅಕ್ರಮ ಕುಡಿಯುವ ನೀರಿನ ಕನೆಕ್ಷನ್ ಹಾಗೂ ಬಿಲ್ ಬಾಕಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಲಿಂಗಪ್ಪಯ್ಯ ಕಾಡು ಕೊಳಚೆ ನೀರು ಹಾದು ಹೋಗುವ ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್ ಇದ್ದು ತೆರವುಗೊಳಿಸಬೇಕು.
ಎಂದು ಸದಸ್ಯ ಭೀಮಾಶಂಕರ್ ಮಂಜುನಾಥ ಕಂಬಾರ ಒತ್ತಾಯಿಸಿದರು ಕೆ ಎಸ್ ರಾವ್ ನಗರದಲ್ಲಿ ಫುಟ್ಪಾತ್ ಅತಿಕ್ರಮಣ ತೆರವುಗೊಳಿಸಬೇಕು, ಮುಲ್ಕಿ ಸರಕಾರಿ ಆಸ್ಪತ್ರೆಯ ಬಳಿ ಬಸ್ ತಂಗುದಾಣ ನಿರ್ಮಾಣ, ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿವೇಳೆ ಅಂಬುಲೆನ್ಸ್ ಬೇಕು, ಲಿಂಗಪ್ಪಯ್ಯ ಕಾಡು ಸಾರ್ವಜನಿಕ ಶೌಚಾಲಯ ಹಾಗೂ ಉದ್ಯಾನವನ ಅಭಿವೃದ್ಧಿ, ಆಸ್ತಿ ತೆರಿಗೆ ಹೆಚ್ಚಳ, ಬಗ್ಗೆ ಚರ್ಚೆ ನಡೆಯಿತು.
ಇತ್ತೀಚೆಗೆ ನಿಧನ ಹೊಂದಿದ ನ ಪಂ ಸದಸ್ಯೆ ಶಾಂತಾ ಕಿರೋಡಿಯನ್ ರವರ ಸ್ಥಾಯಿ ಸಮಿತಿಯ ಸದಸ್ಯರ ಸ್ಥಾನಕ್ಕೆ ರಾಧಿಕಾ ಕೋಟ್ಯಾನ್ ರವರನ್ನು ಆಯ್ಕೆ ಮಾಡಲಾಯಿತು. ನ ಪಂ ಸದಸ್ಯರಾದ ಶೈಲೇಶ್ ಕುಮಾರ್ ,ಸುಭಾಷ್ ಶೆಟ್ಟಿ ದಯಾವತಿ ಅಂಚನ್, ಬಾಲಚಂದ್ರ ಕಾಮತ್, ಲೋಕೇಶ್ ಕೋಟ್ಯಾನ್, ತಿಲಕ್ ಪೂಜಾರಿ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.