ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕುಬೆವೂರು ರೈಲ್ವೇ ಮೇಲ್ಸೇತುವೆ ಬಳಿ ದುಷ್ಕರ್ಮಿಗಳು ಗುಡ್ಡೆಗೆ ಬೆಂಕಿ ಕೊಟ್ಟಿದ್ದು ಧಗಧಗನೆ ಹೊತ್ತಿ ಉರಿಯಲಾರಂಭಿಸಿ ಸ್ಥಳೀಯರನ್ನು ಆತಂಕಕ್ಕಿಡು ಮಾಡಿತ್ತು ಬಿರು ಬಿಸಿಲಿಗೆ ಒಣಗಿದ ಮರ ಮಟ್ಟುಗಳು ಬೆಂಕಿ ಕೆನ್ನಾಲಿಗೆ ಹೊತ್ತಿ ಉರಿಯಲಾರಂಭಿಸಿದ್ದು ಒಂದೆಡೆ ರಾಜ್ಯ ಹೆದ್ದಾರಿ, ಇನ್ನೊಂದೆಡೆ ಕೊಂಕಣ ರೈಲ್ವೆ ಮಾರ್ಗ ಮತ್ತೊಂದೆಡೆ ವಿದ್ಯುತ್ ಟ್ರಾನ್ಸ್ಫಾರ್ಮರ್ ಸಮೀಪದಲ್ಲಿರುವುದರಿಂದ ಕೂಡಲೇ ಸ್ಥಳೀಯರು ಮುಲ್ಕಿ ಪೊಲೀಸರಿಗೆ ಹಾಗೂ ಮಂಗಳೂರು ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ.
ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಅನಾಹುತ ನಡೆಯದಂತೆ ಮುಂಜಾಗರೂಕತಾ ಕ್ರಮವನ್ನು ಕೈಗೊಂಡಿದ್ದಾರೆ. ಬಳಿಕ ಮಂಗಳೂರಿನಿಂದ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಮುಲ್ಕಿ ತಾಲೂಕು ಪರಿಸರದಲ್ಲಿ ಅಗ್ನಿ ಅವಘಡ ನಡೆದರೆ ಸುಮಾರು 30 ಕಿ.ಮೀ ದೂರದ ಮಂಗಳೂರಿನಿಂದ ಅಗ್ನಿಶಾಮಕ ದಳ ಬರಬೇಕಿದ್ದು ಆಗ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಕೂಡಲೇ ಮುಲ್ಕಿಯಲ್ಲಿ ಅಗ್ನಿಶಾಮಕ ದಳ ಘಟಕ ಸ್ಥಾಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.