ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೋಲ್ನಾಡ್ ಪೆಟ್ರೋಲ್ ಬಂಕ್ ಬಳಿ ಬಸ್ಸಿನ ಸ್ಟೇರಿಂಗ್ ರಾಡ್ ನಲ್ಲಿ ಸಮಸ್ಯೆ ಕಾಣಿಸಿಕೊಂಡು ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಉತ್ತರ ಕರ್ನಾಟಕದ ಎಲ್ಲಾಪುರ ಡಿಪ್ಪೋದ ಕೆ ಎಸ್ ಆರ್ ಟಿ ಸಿ ಬಸ್ ಮಂಗಳವಾರ ಸಂಜೆ 4:30 ಗಂಟೆಗೆ ಹುಬ್ಬಳ್ಳಿಯಿಂದ ಮಂಗಳೂರು ಕಡೆಗೆ ಹೊರಟಿದ್ದು ರಾತ್ರಿ 2 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೋಲ್ನಾಡು ಬಳಿ ಸ್ಟೇರಿಂಗ್ ರಾಡ್ ನಲ್ಲಿ ಸಮಸ್ಯೆ ತೀವ್ರಗೊಂಡು ಬಸ್ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹೆದ್ದಾರಿ ಬದಿಯ ಪೆಟ್ರೋಲ್ ಬಂಕ್ ಕಡೆಗೆ ಮುಖ ಮಾಡಿ ನಿಂತಿದೆ
ಅಪಘಾತದ ಸಂದರ್ಭ ಕೂಡಲೇ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸುವಿಕೆ ನಿಲುಗಡೆಯಾದ ಕಾರಣ ಭಾರೀ ಅನಾಹುತ ತಪ್ಪಿದೆ.
ಅಪಘಾತದ ಸಂದರ್ಭ ಬಸ್ಸಿನಲ್ಲಿದ್ದ 15 ಪ್ರಯಾಣಿಕರ ಪೈಕಿ ಓರ್ವ ಸಣ್ಣ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಹಾಗೂ ಮೆಸ್ಕಾಂ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಬಳಿಕ ಹಾನಿಗೀಡಾದ ವಿದ್ಯುತ್ ಕಂಬವನ್ನು ತೆರವುಗೊಳಿಸಲಾಯಿತು.