ಮೂಲ್ಕಿ: ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಸಿಇಟಿ ನೀಟ್ , ಸಿಎ ಫೌಂಡೇಶನ್ ಕೋರ್ಸುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯವೆಂದು ಮೂಲ್ಕಿ ಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಾಲಚಂದ್ರ ಸನಿಲ್ ಹೇಳಿದರು. ಮೂಲ್ಕಿಯ ಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಜರಗಿದ 2024-25 ರ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವ ಹಾಗೂ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯ ಸಂಚಾಲಕ ಹರೀಂದ್ರ ಸುವರ್ಣ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಶಿಸ್ತಿಗೆ ಮಹತ್ವ ನೀಡಿದಾಗ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯ ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆ ಸಂಸ್ಕಾರಯುತ ಹಾಗೂ ಮೌಲ್ಯಯುತವಾದ ಶಿಕ್ಷಣವನ್ನು ನೀಡುತ್ತಿದೆಯೆಂದು ಹೇಳಿದರು. ಆಡಳಿತ ಮಂಡಳಿಯ ಸದಸ್ಯರಾದ ಯೋಗೀಶ್ ಕೋಟ್ಯಾನ್ , ಪ್ರಜ್ಞ ಎ. ಕೋಟ್ಯಾನ್ ,ಅವಿನಾಶ್ ಕೋಟ್ಯಾನ್ ,ಸಂಸ್ಥೆಯ ಆಡಳಿತ ಅಧಿಕಾರಿ ಮಂಜುಳಾ ,ಪ್ರಾಂಶುಪಾಲ ಯತೀಶ ಅಮೀನ್ ಉಪಸ್ಥಿತರಿದ್ದರು. ಉಪನ್ಯಾಸಕಿ ಅಕ್ಷತ ಸ್ವಾಗತಿಸಿದರು, ವನಜ ವಾಸು ವಂದಿಸಿದರು. ಉಪನ್ಯಾಸಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು.