ಮುಂಬೈ: ಗಣೇಶೋತ್ಸವ ಅಂದ್ರೆ ಇಡೀ ಮುಂಬೈಗೆ ಮುಂಬೈ ಸಂಭ್ರಮಿಸುವ ಹಬ್ಬ. ಬೀದಿಯಲ್ಲಿ ಪುಟ್ಟ, ಪುಟ್ಟ ಮಕ್ಕಳು ಕೂಡ ಪುಟ್ಟದೊಂದು ಗಣಪನನ್ನು ಪ್ರತಿಷ್ಠಾಪನೆ ಮಾಡಿ. ಕೈಗೆ ಸಿಕ್ಕ ತಟ್ಟೆ ಸೌಟು ಹಿಡಿದು ಬಡಿಯುತ್ತಾ ಗಣಪತಿ ಬಪ್ಪಾ ಮೋರಯಾ ಎನ್ನುತ್ತಾ ಗಣಪನನ್ನು ವಿಸರ್ಜನೆ ಮಾಡಿ ಸಂಭ್ರಮಿಸುವುದಿದೆ.
ಬಡವರು, ಬಲ್ಲಿದರನ್ನು ಒಂದೆಡೆ ಸೇರಿಸುವಂತೆ ಮಾಡುವ ದೇವರಿಗೆ ಯಾವ ಭೇದವೂ ಇಲ್ಲ. ಆದರೆ ಈ ಮನುಷ್ಯರು ದೇವರ ಹೆಸರಲ್ಲಿ ಮನುಷ್ಯ, ಮನುಷ್ಯರ ನಡುವೆಯೇ ತಾರತಮ್ಯ ಮಾಡುತ್ತಾರೆ. ಅದಕ್ಕೆ ದೊಡ್ಡ ನಿದರ್ಶನವಾಗಿ ನಿಂತಿದೆ ಮುಂಬೈನ ಬಿಲಿಯೇನರ್ ಲಾಲ್ಬೌಗ್ಚಾ ರಾಜ ಗಣಪ. ಮುಂಬೈನ ಅತ್ಯಂತ ಶ್ರೀಮಂತ ಗಣೇಶ ಅಂದ್ರೆ ಅದು ಲಾಲ್ಬೌಗ್ಚಾ ರಾಜ ಗಣೇಶ. ಮುಂಬೈನಲ್ಲಿ ಸಿದ್ಧಿ ವಿನಾಯಕನ ಮಂದಿರಕ್ಕೆ ಹೇಗೆ ಭಕ್ತರ ದಂಡು ಹರಿದು ಬರುತ್ತದೆಯೋ, ಹಾಗೆಯೇ ಈ ಸಾರ್ವಜನಿಕ ಗಣಪನ ದರ್ಶನಕ್ಕೆ ಲಕ್ಷ ಲಕ್ಷ ಭಕ್ತಗಣ ಹರಿದು ಬರುತ್ತದೆ. ಸಾರ್ವಜನಿಕರ ಹಣದಿಂದ, ಸಾರ್ವಜನಿಕರಿಗಾಗಿಯೇ ಪ್ರಿತಷ್ಠಾಪನೆಯಾಗಿರುವ ಗಣೇಶನ ಈ ಸನ್ನಿಧಿಯಲ್ಲಿ ಆಡಳಿತ ಮಂಡಳಿಯೇ ತಾರತಮ್ಯ ಮಾಡಿದ ವಿಚಾರ ಈಗ ದೊಡ್ಡ ಸುದ್ದಿಯಾಗಿದೆ. ವಿಐಪಿ ಸಂಸ್ಕೃತಿ ಈಗ ಸಾರ್ವಜನಿಕ ಗಣೇಶನ ಪೆಂಡಾಲ್ಗೂ ಕೂಡ ಅಂಟಿಕೊಂಡಿದೆ.
ಲಾಲ್ಬೌಗ್ಚಾ ರಾಜ ಗಣೇಶನ ವೀಕ್ಷಣೆಗೆ ಪ್ರತಿ ವರ್ಷ 15 ಲಕ್ಷ ಜನರು ಬರುತ್ತಾರೆ. ಬಡವರು, ಶ್ರೀಮಂತರು ಎನ್ನದೇ ಸಾಲಿನಲ್ಲಿ ನಿಂತು ದರ್ಶನ ಪಡೆದು ಹೋಗುತ್ತಾರೆ. ಆದರೆ ಈ ಬಾರಿ ಆಡಳಿತ ಮಂಡಳಿ ವಿಐಪಿ ಸಂಸ್ಕೃತಿಯನ್ನು ಪರಿಚಯಿಸಿ ಸಾಮಾನ್ಯ ಜನರಿಗೆ ಹೆಚ್ಚು ಕಡಿಮೆ ಅವಮಾನ ಮಾಡಲಾಗಿದೆ. ವಿಐಪಿ ಸಾಲಿನಲ್ಲಿ ಬರುವ ಉಳ್ಳವರು ಬಿಂದಾಸ್ ಆಗಿ ಫೋಟೋ ಹಾಗೂ ಸೆಲ್ಫಿಗಳಿಗೆ ಪೋಸ್ ಕೊಟ್ಟುಕೊಂಡು ನಿಧಾನವಾಗಿ ಆರಾಮಾಗಿ ಗಣೇಶನ ದರ್ಶನ ಮಾಡಿಕೊಂಡು ಹೋಗುತ್ತಿದ್ದರೆ. ಮತ್ತೊಂದು ಕಡೆ ಸಾಮಾನ್ಯ ಸಾಲಿನಲ್ಲಿ ಗಣೇಶನ ದರ್ಶನ ಮಾಡುವ ಭಕ್ತರನ್ನು ಬೇಗ ಬೇಗ ತೆರಳುವಂತೆ ಅವರನ್ನು ಕತ್ತು ಹಿಡಿದು ನೂಕುವ ವಿಡಿಯೋ ಒಂದು ವೈರಲ್ ಆಗಿದ್ದು, ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿಷಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚಿತವಾಗಿದೆ.
ವಿಡಿಯೋ ನೋಡಲು ಲಿಂಕ್ ಕ್ಲಿಕ್ ಮಾಡಿ…