ಮುಂಬೈ: ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಮಂಡಳ ಮುಂಬೈನ ಕಿಂಗ್ ಸರ್ಕಲ್‌ನಲ್ಲಿಯೇ ಅತ್ಯಂತ ಶ್ರೀಮಂತ ಗಣೇಶ ಮಂಡಳಿ. ಈ ಗಣೇಶ್ ಮಂಡಳಿ ಈ ಬಾರಿ ಇನ್ಶೂರೆನ್ಸ್ ವಿಚಾರದಲ್ಲೂ ದೊಡ್ಡ ದಾಖಲೆ ಬರೆದಿದೆ. ಐದು ದಿನದ ಅಂದರೆ, ಸೆ.7ರಿಂದ 11ರವರೆಗೆ ನಡೆಯಲಿರುವ ಗಣೇಶೋತ್ಸವದ ಮೇಲೆ ಬರೋಬ್ಬರಿ 400 ಕೋಟಿ ರೂ. ಇನ್ಶೂರೆನ್ಸ್ ಮಾಡುವ ಮೂಲಕ ಭಾರೀ ಸುದ್ದಿಯಾಗಿದೆ. ಇತ್ತ ಲಾಲಬೌಗ್ಚಾ ರಾಜ ಗಣೇಶೋತ್ಸವಕ್ಕೆ 32.76 ಕೋಟಿ ರೂ. ಇನ್ಶೂರೆನ್ಸ್ ಮಾಡಲಾಗಿದೆ. ಇಲ್ಲಿನ ಗಣೇಶೋತ್ಸವ ಹತ್ತು ದಿನಗಳ ಕಾಲ ನಡೆಯುತ್ತದೆ.
ಜಿಎಸ್‌ಬಿ ಮಂಡಳದ ಗಣೇಶನ ಮೂರ್ತಿ ಮೇಲೆ ಸುಮಾರು 66 ಕೆಜಿ ಚಿನ್ನ, 325 ಕೆಜಿ ಬೆಳ್ಳಿಯ ಆಭರಣಗಳನ್ನು ಹಾಕುತ್ತಾರೆ. ಹೀಗಾಗಿ ಈ ಬಾರಿ 400.58 ಕೋಟಿ ರೂ. ಇನ್ಶೂರೆನ್ಸ್ ಪಾಲಿಸಿ ಮಾಡಿಸಲಾಗಿದೆ.
ಇಷ್ಟು ಬೃಹತ್ ಮೊತ್ತದ ಇನ್ಶೂರೆನ್ಸ್‌ನಲ್ಲಿ 325 ಕೋಟಿ ರೂ. ವೈಯಕ್ತಿಕ ಅಪಘಾತ ಅವಘಡಗಳಿಗೆ ಕವರ್ ಆಗಲಿದೆ. ಅಂದರೆ ಅಡುಗೆಯವರು, ಸೇವೆಯಲ್ಲಿ ನಿರತರಾದವರು, ಪಾರ್ಕಿಂಗ್ ಜಾಗ ನೋಡಿಕೊಳ್ಳುವವರು, ಭದ್ರತಾ ಇಬ್ಬಂದಿ ಮತ್ತು ಗಣಪತಿ ಸ್ಟಾಲ್ ವರ್ಕರ್ಸ್ ಇವರಿಗೆ ಏನಾದರೂ ಅಪಾಯವಾದರೆ 325 ಕೋಟಿ ರೂ. ಕ್ಲೇಮ್ ಆಗುತ್ತದೆ. ಇನುಳಿದ 43.15 ಕೋಟಿ ರೂ. ಗಣೇಶನ ಮೇಲಿನ ಚಿನ್ನ, ಬೆಳ್ಳಿಯ ಆಭರಣ ಕಳವಾದರೆ ಪರಿಹಾರ ಸಿಗಲಿದೆ. ಉಳಿದ 2 ಕೋಟಿ ರೂ. ಬೆಂಕಿ ಅವಘಡ, ಭೂಕಂಪದಲ್ಲಿ ಮಂಡಳದ ಪೀಠೋಪಕರಣ, ಕಂಪ್ಯೂಟರ್, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಸ್ಥಿರಾಸ್ಥಿಗೆ ಹಾನಿಯಾದರೆ ಅದಕ್ಕೆ ಕ್ಲೇಮ್ ಮಾಡಿಕೊಳ್ಳಬಹುದು. ಇನ್ನು 30 ಕೋಟಿ ರೂ. ಪೆಂಡಾಲ್, ಸ್ಟೇಡಿಯಂ ಹಾಗೂ ಭಕ್ತರಿಗೆ ಹಾನಿಯಾದಲ್ಲಿ ಉಪಯೋಗಿಸಿಕೊಳ್ಳಲು ಅವಕಾಶವಿದೆ ಎಂದು ಮಂಡಳದ ಅಧ್ಯಕ್ಷ ಅಮಿತ್ ಪೈ ಹೇಳಿದ್ದಾರೆ.