ಯಾದಗಿರಿ: ತನ್ನನ್ನು ಪ್ರೀತಿಸುವಂತೆ ಕೇಳಿದ್ದಕ್ಕೆ ಪ್ರೀತಿಸಲು ನಿರಾಕರಿಸಿದ ಮಗುವೊಂದರ ಚಿಕ್ಕಪ್ಪನ ಮೇಲೆ ಕೊಲೆ ಆರೋಪ ಬರುವಂತೆ ಸಂಚು ರೂಪಿಸಿ ಅಪ್ರಾಪ್ತೆಯೊಬ್ಬಳು ಮಗುವನ್ನು ಬಾವಿಗೆಸೆದು ಕೊಲೆಗೈದ ಘಟನೆ ನಡೆದಿದೆ. ಯಾದಗಿರಿ ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ಜು.6ರಂದು ನಾಗೇಶ್ ಮತ್ತು ಚಿಟ್ಟೆಮ್ಮ ಎಂಬವರ 2 ತಿಂಗಳ ಹಸುಗೂಸನ್ನು ಬಾವಿಗೆ ಎಸೆದು ಕೊಲೆ ಮಾಡಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬಾಲಕಿಯೊಬ್ಬಳನ್ನು ಮಗುವನ್ನು ಬಾವಿಗೆಸೆದು ಕೊಂದಿದ್ದಳು. ಮಗುವನ್ನು ಹತ್ಯೆ ಮಾಡಿ ಬಳಿಕ ಆಕೆ ಕಣ್ಣೀರು ಹಾಕಿ ನಾಟಕ ಮಾಡಿದ್ದಳು. ಮಗು ಕಾಣದಿದ್ದಾಗ ಮನೆಯವರು ಹುಡುಕುವಾಗ ಅವರೊಂದಿಗೆ ಹುಡುಕುವ ನಾಟಕ ಮಾಡುತ್ತಾ, ಒಬ್ಬರು ಮಗುವನ್ನು ಬಾವಿಯತ್ತ ಕೊಂಡೊಯ್ದಿದ್ದಾರೆ, ಅಲ್ಲಿರಬಹುದು ಎಂದು ಹೇಳಿದ್ದಳು.
ಕೊಲೆಯಾದ ಮಗುವಿನ ಚಿಕ್ಕಪ್ಪ ಯಲ್ಲಪ್ಪ ಎಂಬಾತನನ್ನು ಅಪ್ರಾಪ್ತೆ ಪ್ರೀತಿಸುತ್ತಿದ್ದಳು. ಆತನಿಗೆ ಐದು ಬಾರಿ ಪ್ರಪೋಸ್ ಮಾಡಿದ್ದಳು. ಸಂಬಂಧದಲ್ಲಿ ಬಾಲಕಿ ತಂಗಿಯಾಗುವ ಕಾರಣ ಯಲ್ಲಪ್ಪ ಆಕೆಯ ಪ್ರಪೋಸಲ್ ನಿರಾಕರಿಸಿದ್ದ. ಇದರಿಂದ ಸಿಟ್ಟಿಗೆದ್ದ ಬಾಲಕಿ, ಮಗುವನ್ನು ಕೊಂದು ಯಲ್ಲಪ್ಪನ ಮೇಲೆ ಕೊಲೆ ಆರೋಪ ಬರುವಂತೆ ಸಂಚು ರೂಪಿಸಿದ್ದಳು. ಅದರಂತೆ ಆಕೆಯೇ ಮಗುವನ್ನು ಬಾವಿಗೆಸೆದಿದ್ದಳು. ಬಾಲಕಿಯ ಹುಚ್ಚು ಪ್ರೀತಿಗೆ ಮುಗ್ಧ ಮಗುವೊಂದು ಬಲಿಯಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.