ದೊಡ್ಡಬಳ್ಳಾಪುರ: ಮೂರು ತಿಂಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬ ಹಣದ ವಿಚಾರವಾಗಿ ಗೆಳೆಯರಿಂದಲೇ ಕೊಲೆಯಾದ ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾಶೆಟ್ಟಿಹಳ್ಳಿ ನಿವಾಸಿ ದೇವರಾಜು (45) ಕೊಲೆಯಾದ ವ್ಯಕ್ತಿ. ಈ ಪ್ರಕರಣವನ್ನು ಭೇದಿಸಿರುವ ಪೊಲೀಸರು, ರಾಜ್ಕುಮಾರ್ ಮತ್ತು ಅನಿಲ್ ಎಂಬವರನ್ನು ಬಂಧಿಸಿದ್ದಾರೆ.
ಉದ್ಯಮಿ ದೇವರಾಜು ಮಾಡುತ್ತಿದ್ದ ವ್ಯವಹಾರದಲ್ಲಿ ರಾಜ್ಕುಮಾರ್ ಜೊತೆಗಾರನಾಗಿದ್ದ. ವ್ಯವಹಾರಕ್ಕೆಂದು ಸುಮಾರು 70 ಲಕ್ಷ ರೂ. ರಾಜ್ಕುಮಾರ್, ದೇವರಾಜು ಬಳಿಯಿಂದ ಪಡೆದಿದ್ದ. ಈ ಹಣವನ್ನು ವಾಪಸ್ ಕೊಡುವಂತೆ ದೇವರಾಜು ಪದೇ ಪದೆ ಕೇಳುತ್ತಿದ್ದ. ಇದರಿಂದ ರಾಜ್ಕುಮಾರ್, ದೇವರಾಜುನನ್ನು ಕೊಲೆ ಮಾಡಲು ನಿರ್ಧರಿಸಿದ್ದ. ಅದರಂತೆ ಅಕ್ಟೋಬರ್ 14ರಂದು ದೇವರಾಜುನ ಮನೆಗೆ ಬಂದ ರಾಜ್ಕುಮಾರ್, ಹಣ ಕೊಡುವುದಾಗಿ ಹೇಳಿ ಕಾರಿನಲ್ಲಿ ಗೌರಿಬಿದನೂರು ಕಡೆಗೆ ಕರೆದುಕೊಂಡು ಹೋಗಿ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಶವವನ್ನು ದೊಡ್ಡಬಳ್ಳಾಪುರ ಹೊರವಲಯದ ಇನ್ಫೋಸಿಟಿಯಲ್ಲಿರುವ ತನ್ನ ನಿವೇಶನದಲ್ಲಿ ಗುಂಡಿ ತೋಡಿ ಮುಚ್ಚಿ ಹಾಕಿದ್ದ. ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಶವವನ್ನು ಗುಂಡಿಯಿಂದ ಹೊರ ತೆಗೆದು ಡ್ರಮ್ನಲ್ಲಿ ಹಾಕಿ ಸುಟ್ಟು ಹಾಕಿದ್ದ. ಅಲ್ಲದೆ, ಅರೆಬರೆಯಾಗಿ ಸುಟ್ಟ ಶವವನ್ನು ಮಧುರೆ ಕೆರೆಗೆ ಎಸೆದು ತಾನಗೇನು ಗೊತ್ತೇ ಇಲ್ಲ ಎಂಬುವಂತೆ ದೇವರಾಜು ಕುಟುಂಬಸ್ಥರೊಂದಿಗೆ ಸೇರಿ ಹುಡುಕಾಟದ ನಾಟಕವಾಡಿದ್ದರು. ಮೃತ ದೇವರಾಜು ಕುಟುಂಬಸ್ಥರು ಅಕ್ಟೋಬರ್ 17ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆಗಿಳಿದ ಪೊಲೀಸರು, ರಾಜ್ಕುಮಾರ್ನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.