ಭೋಪಾಲ್: ಮುಸ್ಲಿಂ ಪುರುಷ ಹಾಗೂ ಹಿಂದೂ ಮಹಿಳೆ ವಿವಾಹವನ್ನು ಮುಸ್ಲಿಂ ಲಾ ಬೋರ್ಡ್ ಪ್ರಕಾರ ಮಾನ್ಯವಲ್ಲ. ಈ ಮದುವೆಯನ್ನು ಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಮಧ್ಯ ಪ್ರದೇಶ ಹೈಕೋರ್ಟ್ ಹೇಳಿದೆ. ಅಂತರ್ ಧರ್ಮ ವಿವಾಹ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ತಿರಸ್ಕರಿಸಿದೆ. ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಿದ್ದರೂ ಮುಸ್ಲಿಂ ಲಾ ಬೋರ್ಡ್ ಪ್ರಕಾರ ಈ ಮದುವೆಯನ್ನು ಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಜಸ್ಟೀಸ್ ಗುರುಪಾಲ್ ಸಿಂಗ್ ಅಹ್ಲುವಾಲಿಯಾ ಈ ಕುರಿತು ಮಹತ್ವದ ತೀರ್ಪು ನೀಡಿದ್ದಾರೆ. ಮುಸ್ಲಿಂ ಪುರುಷ, ಹಿಂದೂ ಮಹಿಳೆ ನಡುವಿನ ವಿವಾಹಕ್ಕೆ ಮುಸ್ಲಿಂ ಕಾನೂನಿನಲ್ಲಿ ಮಾನ್ಯತೆ ಇಲ್ಲ. ಇದನ್ನು ಮಾನ್ಯವಾದ ವಿವಾಹ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದಕ್ಕೆ ಕೋರ್ಟ್ ಮುಸ್ಲಿಂ ಲಾ ಬೋರ್ಡ್ ನಿಯಮಗಳನ್ನು ಉಲ್ಲೇಖಿಸಿದೆ.
ಹಿಂದೂ ಮಹಿಳೆ ಮೂರ್ತಿ ಪೂಜಕರಾಗಿದ್ದಾರೆ. ಇಸ್ಲಾಂನಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಹಿಂದೂ ಭಕ್ತಿ ಹಾಗೂ ನಂಬಿಕೆ ಇಸ್ಲಾಂಗೆ ತದ್ವಿರುದ್ಧವಾಗಿದೆ. 1954ರ ವಿಶೇಷ ವಿವಾಹ ಕಾಯ್ದೆಯಡಿ ದಂಪತಿ ಮದುವೆಯಾಗಿದ್ದರೂ, ಈ ಮದುವೆಗೆ ಮುಸ್ಲಿಂ ಲಾ ಬೋರ್ಡ್‌ನಲ್ಲಿ ಯಾವ ಮಾನ್ಯತೆಯೂ ಇಲ್ಲ. ಈ ಮದುವೆ ಮೊಹಮ್ಮದೀಯನ್ ಕಾನೂನಿನಲ್ಲಿ ಫಾಸಿದ್ ಎಂದಿದೆ.
ಪೋಷಕರ ತೀವ್ರ ವಿರೋಧದ ಬಳಿಕ ಹಿಂದೂ ಮಹಿಳೆ ಮುಸ್ಲಿಂ ಪುರುಷನ ಜೊತೆ ವಿವಾಹವಾಗಿದ್ದಾಳೆ. ಮನೆಯಲ್ಲಿದ್ದ ಚಿನ್ನಾಭರಣವನ್ನೆಲ್ಲಾ ತೆಗೆದುಕೊಂಡು ಹೋಗಿ ಮುಸ್ಲಿಂ ಪುರುಷನ ಜೊತೆ ವಿವಾಹವಾಗಿದ್ದಳು. ಸ್ಪೆಷಲ್ ಮ್ಯಾರೇಜ್ ಆ್ಯಕ್ಟ್ ಅಡಿಯಲ್ಲಿ ಮದುವೆ ನೋಂದಣಿ ಮಾಡಲಾಗಿತ್ತು. ಹಿಂದೂ ಮಹಿಳೆ ಇಸ್ಲಾಂಗೆ ಮತಾಂತರವಾದರೆ ಮಾತ್ರ ಮದುವೆ ಮಾನ್ಯವಾಗಲಿದೆ ಎಂಬ ಒತ್ತಡ ಎದುರಾಗಿತ್ತು. ಹಿಂದೂ ಮಹಿಳೆಗೆ ಇಸ್ಲಾಂಗೆ ಮತಾಂತರವಾಗಲು ಇಷ್ಟವಿರಲಿಲ್ಲ. ಇತ್ತ ಮುಸ್ಲಿಂ ಪುರುಷನಿಗೆ ಹಿಂದೂ ಧರ್ಮಗೆ ಮತಾಂತರವಾಗಲೂ ಇಷ್ಟವಿರಲಿಲ್ಲ. ಹೀಗಾಗಿ ಪತಿ ಹಾಗೂ ಪತ್ನಿ ಇಬ್ಬರು ಕೋರ್ಟ್ ಮೆಟ್ಟಿಲೇರಿದ್ದರು.
ಹಿಂದೂ ಮುಸ್ಲಿಂ ವಿವಾಹವಾಗಿರುವ ಕಾರಣ ತಮ್ಮ ಮದುವೆಯನ್ನು ಮಾನ್ಯ ಮಾಡಬೇಕು, ಸತಿ ಪತಿ ಎಂದು ಮಾನ್ಯತೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ಮುಸ್ಲಿಂ ಲಾ ಬೋರ್ಡ್‌ನಲ್ಲಿ ಈ ಮುಸ್ಲಿಂ ಹಾಗೂ ಹಿಂದೂ ಮದುವೆಗೆ ಮಾನ್ಯತೆ ಇಲ್ಲದ ಕಾರಣ ಈ ದಂಪತಿ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಇದೀಗ ಹಿಂದೂ ಮಹಿಳೆಗೆ ತನ್ನ ಮದುವೆ ಮಾನ್ಯ ಮಾಡಲು ಮತಾಂತರವಾಗದೇ ಅನ್ಯ ಮಾರ್ಗ ಕಾಣದ ಪರಿಸ್ಥಿತಿ ಎದುರಾಗಿದೆ.