ಮಾಜಿ ಡಾನ್ ಮುತ್ತಪ್ಪ ರೈ ಅವರ ಬಂಧುಗಳ ನಡುವಿನ ಆಸ್ತಿ ವಿವಾದ ಬೆಂಗಳೂರಿನ 19ನೇ ಸಿಟಿ ಸಿವಿಲ್ ಹಾಗೂ ಸೆಷನ್ ಕೋರ್ಟ್ನಲ್ಲಿ ಇತ್ಯರ್ಥಗೊಂಡಿದೆ. ಲೋಕ ಅದಾಲತ್ ಮೂಲಕ ಕೋರ್ಟ್ನಲ್ಲಿ ಸಂಧಾನ ಮಾಡಿ ಆಸ್ತಿ ವಿವಾದವನ್ನು ಬಗೆಹರಿಸಿಕೊಳ್ಳಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಮುತ್ತಪ್ಪ ರೈ ಆಸ್ತಿಯಲ್ಲಿ ಪಾಲು ಕೇಳಿ ರೈ ಅವರ ಎರಡನೇ ಪತ್ನಿ ಅನುರಾಧಾ ರೈ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಆ ವಿವಾದ ಲೋಕ ಅದಾಲತ್ ಮೂಲಕ ಸೌಹಾರ್ಧಯುತವಾಗಿ ಇತ್ಯರ್ಥಗೊಂಡಿದೆ.
ಮೃತಪಡುವ ಒಂದು ವರ್ಷದ ಹಿಂದೆ, 2019ರಲ್ಲಿ ಮುತ್ತಪ್ಪ ರೈ ಆಸ್ತಿಗೆ ಸಂಬಂಧಿಸಿದಂತೆ ವಿಲ್ ಮಾಡಿಟ್ಟಿದ್ದರು. ವಕೀಲ ನಾರಾಯಣಸ್ವಾಮಿಯವರನ್ನು ವಿಲ್ ಎಕ್ಸಿಕ್ಯೂಟರ್ ಆಗಿ ನೇಮಿಸಿ, ಅಡ್ವೋಕೇಟ್ ಗೀತಾರಾಜ್ ಎಂಬುವವರ ಮೂಲಕ ಆಸ್ತಿಗೆ ಸಂಬಂಧಿಸಿದಂತೆ ವಿಲ್ ಬರೆಸಿದ್ದರು ಎನ್ನಲಾಗಿದೆ. ಸಾವಿರ ಕೋಟಿಗೂ ಅಧಿಕ ಮೌಲ್ಯದ ಆಸ್ತಿಗೆ ಸುಮಾರು 41 ಪುಟಗಳ ವಿಲ್ ಬರೆಸಿದ್ದ ಮುತ್ತಪ್ಪ ರೈ, ಪುತ್ರರಾದ ರಾಕಿ ರೈ, ರಿಕ್ಕಿ ರೈ, ಸಹೋದರನ ಪುತ್ರ ಅಶ್ವಿನ್ ರೈ, ಎರಡನೇ ಪತ್ನಿ ಅನುರಾಧ ರೈ ಸೇರಿ ಮನೆಗೆಲಸದವರ ಬಗ್ಗೆಯೂ ಉಲ್ಲೇಖ ಮಾಡಿದ್ದರು.
2020ರಲ್ಲಿ ಮುತ್ತಪ್ಪ ರೈ ನಿಧನರಾದ ಬಳಿಕ ಕೋರ್ಟ್ನಲ್ಲಿ ಆಸ್ತಿಯಲ್ಲಿ ಪಾಲು ಕೇಳಿ ರೈ ಅವರ ಎರಡನೇ ಪತ್ನಿ ಅನುರಾಧ ದಾವೆ ಹೂಡಿದ್ದರು. ಮುತ್ತಪ್ಪ ರೈ ಪುತ್ರರಾದ ರಾಕಿ ರೈ, ರಿಕ್ಕಿ ರೈರನ್ನು ಪ್ರತಿವಾದಿಗಳಾಗಿ ಮಾಡಿ ದಾವೆ ಹೂಡಿದ್ದರು. ಸದ್ಯ ಕಾಂಪ್ರಮೈಸ್ ಪಿಟಿಷನ್ ಮೂಲಕ ಆಸ್ತಿ ವಿವಾದ ಇತ್ಯರ್ಥಗೊಂಡಿದೆ. ಸುಮಾರು ನೂರು ಕೂಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಮುತ್ತಪ್ಪ ರೈ ಎರಡನೇ ಪತ್ನಿಗೆ ನೀಡಲಾಗಿದೆ. ಕೋರ್ಟ್ ಸಂಧಾನದ ಮೂಲಕ ಅನುರಾಧ ರೈ ಅವರಿಗೆ ಮುತ್ತಪ್ಪ ರೈ ಮಕ್ಕಳಾದ ರಿಕ್ಕಿ ರೈ, ರಾಕಿ ರೈ ನೀಡಿರುವ ಆಸ್ತಿ ವಿವಿರ ಹೀಗಿದೆ:
*ಏಳು ಕೋಟಿ ಹಣ
*ಮಂಡ್ಯದ ಪಾಂಡವಪುರದ ಬಳಿ 22 ಎಕರೆ ಜಮೀನು
*ಮೈಸೂರಿನಲ್ಲಿ 4800 ಚದರಡಿ ನಿವೇಶನ ಹಾಗೂ ನಿವೇಶನದಲ್ಲಿನ ಮನೆ
*ನಂದಿಬೆಟ್ಟ ಬಳಿಯ ಕೆಂಪತಿಮ್ಮನಹಳ್ಳಿಯಲ್ಲಿ ಐದೂವರೆ ಎಕರೆ ಜಮೀನು
ಸದ್ಯ ಅನುರಾಧ ರೈ ಕೋರ್ಟ್ ಮೂಲಕ ಮುತ್ತಪ್ಪ ರೈ ಪುತ್ರರಿಂದ ಪಡೆದಿರುವ ಆಸ್ತಿ ಮೌಲ್ಯ ನೂರು ಕೋಟಿ ಬೆಲೆಬಾಳುತ್ತೆ ಎನ್ನಲಾಗುತ್ತಿದೆ.