ಮಂಗಳೂರು: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಪ್ರಮುಖ ರಾಜಕೀಯ ಪಕ್ಷಗಳ ಜೊತೆಗೆ ದೇಶದ ಇನ್ನೊಂದು ಪ್ರಮುಖ ಪಕ್ಷ ಬಹುಜನ ಸಮಾಜ ಪಕ್ಷದಿಂದ ಕಾಂತಪ್ಪ ಅಲಂಗಾರ್ ಸ್ಪರ್ಧಿಸುತ್ತಿದ್ದಾರೆ. ತುಳುನಾಡಿನ ನೆಲ-ಜಲ-ಜನಜೀವನ ಸಮೃದ್ಧಿಗಾಗಿ ಮತ್ತು ತುಳುವರ ಅಸ್ಮಿತೆಗಾಗಿ ತಾನು ಚುನಾವಣೆಗೆ ಸ್ಪರ್ಧಿಸಿರುವುದಾಗಿ ಕಾಂತಪ್ಪ ಅಲಂಗಾರ್ ಹೇಳಿದ್ದಾರೆ. ಸುಮಾರು ನಲವತ್ತು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿರುವ ತಾವು ಸಾಮಾಜಿಕ ನ್ಯಾಯಕ್ಕೆ ಸಂಬಂಧಪಟ್ಟ ಜನಸಾಮಾನ್ಯರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತಿದ್ದೇನೆ. ತುಳುನಾಡಿನ ಎಲ್ಲಾ ಶೋಷಿತ ಜನ ಸಮುದಾಯಗಳ ನಡುವೆ ಮೈತ್ರಿಯನ್ನು ಸ್ಥಾಪಿಸಲು ಹೋರಾಡಿದ ಪ್ರಮುಖ ವ್ಯಕ್ತಿಗಳಲ್ಲಿ ತಾನೂ ಇದ್ದೆ. ಜಿ್ಲ್ಲೆಯಲ್ಲಿ ಕೋಮು ಮತ್ತು ಜಾತಿಗಳ ನಡುವೆ ಸಾಮರಸ್ಯ ಸ್ಥಾಪಿಸಲು ತಾವು ನಿರಂತರ ಹೋರಾಡುತ್ತಿರುವುದಾಗಿ ಅವರು ಹೇಳಿದ್ದಾರೆ. ತುಳುನಾಡಿನ ನೆಲ-ಜಲ-ಜನಜೀವನ, ವ್ಯಾಪಾರ ವಹಿವಾಟು, ಸಂಸ್ಕೃತಿ-ಇತಿಹಾಸ, ಉದ್ಯೋಗ, ಕೃಷಿ, ವಾಣಿಜ್ಯ ಮತ್ತು ಕೈಗಾರಿಕೆ, ತುಳುಭಾಷೆ ಮುಂತಾದ ವಿಚಾರಗಳ ಬಗ್ಗೆ ಸ್ಪಷ್ಟ ಚಿತ್ರಣ ಹಾಗೂ ತುಳುನಾಡಿನ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಪರಿಕಲ್ಪನೆ ಹಾಗೂ ಯೋಜನೆ ತಾವು ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆ, ತುಳುಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇಧಕ್ಕೆ ಸೇರಿಸುವುದು, ತುಳುನಾಡಿನ ಸಂಸ್ಕೃತಿ ಮತ್ತು ಅಸ್ಮಿತೆ ರಕ್ಷಿಸುವುದು, ನೇತ್ರಾವತಿ ನದಿ ತೀರ ಪ್ರದೇಶಗಳ ರಕ್ಷಣೆಗಾಗಿ ವಿಶೇಷ ಯೋಜನೆ ರೂಪಿಸುವುದು, ದಕ್ಷಿಣ ಕನ್ನಡದ ಸ್ಥಳೀಯರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗಗಳನ್ನು ಖಾತರಿಪಡಿಸುವುದು ತಮ್ಮ ಸ್ಪರ್ಧೆಯ ಪ್ರಮುಖ ಉದ್ದೇಶ ಎಂದು ಅವರು ಹೇಳಿದ್ದಾರೆ. ಅಡಿಕೆ ಬೆಳೆಗಾರರ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವುದು, ಭತ್ತದ ಕೃಷಿ ತುಳುನಾಡಿನ ಅಸ್ಮಿತೆಯಾಗಿದ್ದು, ಅದಕ್ಕೆ ಬೆಂಬಲ ಬೆಲೆ ಖಾತರಿಪಡಿಸುವುದು, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿ ಆಧಾರಿತ, ಪರಿಸರ ಸಹ್ಯ ಕೈಗಾರಿಕೆ, ಉದ್ಯಮಗಳ ಸ್ಥಾಪನೆ ಮೂಲಕ ನಿರುದ್ಯೋಗ ನಿವಾರಿಸುವುದು ತಮ್ಮ ಮೊದಲ ಆದ್ಯತೆ ಎಂದು ಅವರು ತಿಳಿಸಿದ್ದಾರೆ. ಬಹುಜನ ಸಮುದಾಯಗಳಿಗೆ ಸಾಂವಿಧಾನಿಕವಾಗಿ ಸಲ್ಲಬೇಕಾದ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದು, ಕಾರ್ಮಿಕರು, ಮಹಿಳೆಯರು, ರೈತರ ಸ್ವಾವಲಂಬನೆ ಮತ್ತು ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವುದು, ಜಿಲ್ಲೆಯ ಎಲ್ಲಾ ತಾಲೂಕು ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು, ತುಳುನಾಡಿನ ಸಾಂಸ್ಕೃತಿಕ ವೀರರುಗಳಾದ ಕೋಟಿ-ಚೆನ್ನಯ, ಬಬ್ಬುಸ್ವಾಮು, ಸತ್ಯಸಾರಮಾನಿ ಕಾನದ-ಕಟದ, ಮುದ್ದ-ಕಳಲ ಮತ್ತಿತರ ಸಾಂಸ್ಕೃತಿಕ ವೀರರುಗಳಿಗೆ ಸಂಬಂಧಪಟ್ಟ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಸರಕಾರದ ಅನುದಾನ ಒದಗಿಸಿಕೊಡಲು ತಾನು ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.
ಹೀಗಾಗಿ ಈ ಚುನಾವಣೆಯಲ್ಲಿ ತುಳುನಾಡಿನ ಸಮಗ್ರ ಅಭಿವೃದ್ಧಿಗಾಗಿ ತಮ್ಮನ್ನು ಆಯ್ಕೆ ಮಾಡುವಂತೆ ಅವರು ಮತದಾರರನ್ನು ಮನವಿ ಮಾಡಿದ್ದಾರೆ.