ಶಾಸ್ತ್ರೀಯ ಭರತನಾಟ್ಯ ಕ್ಷೇತ್ರದಲ್ಲಿ ನಾಡಿನಾದ್ಯಂತ ತನ್ನದೇ ಛಾಪನ್ನು ಮೂಡಿಸಿ ಪ್ರಖ್ಯಾತರಾಗಿರುವ ಡಾ. ವಸುಂಧರಾ ದೊರೆಸ್ವಾಮಿ ಅವರ 25ನೇ ಹುಟ್ಟುಹಬ್ಬದ ಪ್ರಯುಕ್ತ ವಸುಂಧರೋತ್ಸವ 2024 ಎಂಬ ರಾಷ್ಟ್ರೀಯ ಗೀತನೃತ್ಯ ಉತ್ಸವದ ಅಂಗವಾಗಿ ಕರ್ನಾಟಕದ ಕಲಾವಿದರು ಹಾಗೂ ನೃತ್ಯ ವಿದ್ಯಾರ್ಥಿಗಳಿಗಾಗಿ ಮೈಸೂರು ಕಲಾ ದಿವಸ್ ಎಂಬ ಸಾಂಸ್ಕೃತಿಕ ಉತ್ಸವವನ್ನು ಇದೇ ಬರುವ ನವೆಂಬರ್ 24ರಂದು ಮೈಸೂರಿನಲ್ಲಿ ಆಯೋಜಿಸಲಾಗಿದೆ. ದೇಶ ವಿದೇಶಗಳಲ್ಲಿ ನೃತ್ಯಶಿಕ್ಷಕರಾಗಿರುವ ಡಾ. ವಸುಂಧರಾ ಅವರ ಶಿಷ್ಯರು ವಸುಂಧರಾ-75 ಎಂಬ ಸಮಿತಿಯನ್ನು ರಚಿಸಿ ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದಾರೆ.
ಡಾ. ವಸುಂಧರಾ ಅವರ ನೃತ್ಯ ಸಂಯೋಜನೆಯ ಮೂರು ನೃತ್ಯ ಬಂಧಗಳನ್ನು ನರ್ತಿಸುವ ಅವಕಾಶವನ್ನು ನೋಂದಾಯಿತ ಕಲಾವಿದರಿಗೆ ಮೈಸೂರು ಕಲಾದಿವಸ್ ಒದಗಿಸಲಿದೆ. 75ರ ಪ್ರಾಯದಲ್ಲೂ ಬೇಡಿಕೆಯ ನರ್ತಕಿಯಾಗಿ ಪ್ರಸಿದ್ಧರಾಗಿರುವ ಡಾ. ವಸುಂಧರಾ ಅವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಂದಾಜು ೭೫೦ ನೃತ್ಯಕಲಾವಿದರ ಪ್ರದರ್ಶನವನ್ನು ಏರ್ಪಡಿಸುವ ಬೃಹತ್ ಯೋಜನೆ ಇದಾಗಿದೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಆಸಕ್ತ ನೃತ್ಯಕಲಾವಿದರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.
ಮೈಸೂರಿನ ವಸುಂಧರಾ ಪ್ರದರ್ಶಕ ಕಲೆಗಳ ಕೇಂದ್ರದ ಆಯೋಜನೆಯಲ್ಲಿ ಕಳೆದ ೪೦ ವರುಷಗಳಿಂದ ಪ್ರಸ್ತುತಗೊಳ್ಳುತ್ತಿರುವ ವಸುಂಧರೋತ್ಸವು ಈ ಬಾರಿ ನವೆಂಬರ್ 15 ಕ್ಕೆ ಮೈಸೂರಿನ ಸರಸ್ವತೀಪುರಂನಲ್ಲಿರುವ ವಸುಂಧರಾ ಭವನದಲ್ಲಿ ಉದ್ಘಾಟನೆಗೊಳ್ಳಲಿದ್ದು, ಮೈಸೂರು ಕಲಾದಿವಸ್ ಈ ಉತ್ಸವದ ಕೊನೆಯ ಕಾರ್ಯಕ್ರಮವಾಗಿದೆ. ನೋಂದಾವಣೆಗಾಗಿ ಹಾಗೂ ಹೆಚ್ಚಿನ ವಿವರಗಳಿಗಾಗಿ ಆಸಕ್ತರು ಡಾ. ಭ್ರಮರಿ ಶಿವಪ್ರಕಾಶ್(9448782884)ಅವರನ್ನು ಸಂಪರ್ಕಿಸಬಹುದಾಗಿ ಪ್ರಕಟನೆ ತಿಳಿಸಿದೆ.