ಮೈಸೂರು: ಕರೆದಾಗ ಬರುವುದಿಲ್ಲ ಎಂದ 3 ವರ್ಷದ ಪುಟ್ಟ ಬಾಲಕಿಯ ಕೈಯನ್ನು ಚಿಕ್ಕಪ್ಪನೇ ಮುರಿದ ಆರೋಪ ಕೇಳಿಬಂದಿದೆ. ಆಟವಾಡುತ್ತಿದ್ದ ಮಗು ಕರೆದಾಗ ಬರಲಿಲ್ಲವೆಂಬ ಕಾರಣಕ್ಕೆ ಬಾಲಕಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ದೊಣ್ಣೆಯಿಂದ ಹೊಡೆದು ಎರಡು ಕೈಗಳನ್ನು ಚಿಕ್ಕಪ್ಪ ಮುರಿದಿದ್ದಾನೆ ಎಂದು ಆರೋಪಿಸಲಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬೀರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿ ಆನಂದ್ (23) ಪೊಲೀಸರ ಅತಿಥಿಯಾಗಿದ್ದಾನೆ.
ತನ್ನ ಚಿಕ್ಕಪ್ಪನೇ ಮಾಡಿದ ದುಷ್ಕೃತ್ಯಕ್ಕೆ ಅಮಾಯಕ ಬಾಲಕಿ ಜಾನ್ಸಿ (3) ತನ್ನ ಕೈಮುರಿದುಕೊಂಡು ಆಸ್ಪತ್ರೆಯಲ್ಲಿ ಮಲಗುವಂತಾಗಿದೆ. ಆಟೋ ಓಡಿಸುತ್ತಿದ್ದ ಆನಂದ್, ಶನಿವಾರ ರಜೆ ಇದ್ದ ಕಾರಣ ಮನೆಯಲ್ಲಿ ಆಟವಾಡುತ್ತಿದ್ದ ಜಾನ್ಸಿಯನ್ನು ಕರೆದಿದ್ದಾನಂತೆ. ಆದರೆ, ಆನಂದ್ ಜೊತೆ ಹೋಗಲು ಜಾನ್ವಿ ನಿರಾಕರಿಸಿದ್ದಾಳೆ ಎಂದು ಹೇಳಲಾಗಿದೆ. ಹೀಗಾಗಿ ಜಾನ್ಸಿಯನ್ನು ಬಲವಂತವಾಗಿ ಆಟೋದಲ್ಲಿ ಕರೆದೊಯ್ದು ದೊಣ್ಣೆಯಿಂದ ಥಳಿಸಿರುವ ಆರೋಪ ಮಾಡಲಾಗಿದೆ. ಗಂಭೀರ ಗಾಯಗೊಂಡ ಜಾನ್ನಿಗೆ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.