ಮುಲ್ಕಿ: ನಗರ ಪಂಚಾಯತ್ ಮಾಸಿಕ ಸಭೆ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆಯಲ್ಲಿ ನಡೆಯಿತು
ಸಭೆಯಲ್ಲಿ ಸದಸ್ಯ ಯೋಗೀಶ್ ಕೋಟ್ಯಾನ್ ಮಾತನಾಡಿ ನ.ಪಂ.ವ್ಯಾಪ್ತಿಯ ಚಿತ್ರಾಪು ಕಟ್ಟೆ ಜಂಕ್ಷನ್ ಬಳಿಯ ಅಪಾಯಕಾರಿ ಮರಕ್ಕೆ ವಿದ್ಯುತ್ ತಂತಿ ತಾಗಿಕೊಂಡಿದ್ದು ಶಾರ್ಟ್ ಸರ್ಕ್ಯೂಟ್ ನಿಂದ ಅನಾಹುತಗಳು ಸಂಭವಿಸುತ್ತಿದೆ ಕೂಡಲೇ ಮರವನ್ನು ತೆರವುಗೊಳಿಸಲು ಮೆಸ್ಕಾಂಗೆ ಮನವಿ ಮಾಡಿದರು.
ಸದಸ್ಯ ಸಂದೀಪ್ ಕುಮಾರ್ ಮಾತನಾಡಿ ಕೆಎಸ್ ರಾವ್ ನಗರದಲ್ಲಿ ಅಪಾಯಕಾರಿ ವಿದ್ಯುತ್ ಕಂಬ ತೆರವುಗೊಳಿಸಲು ಅನೇಕ ಬಾರಿ ಮೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದರೂ ಇದುವರೆಗೂ ತೆರವುಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಮೆಸ್ಕಾಂ ಅಧಿಕಾರಿ ಕೃಷ್ಣಪ್ಪ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು
ನ.ಪಂ. ವ್ಯಾಪ್ತಿಯ ಪಡುಬೈಲು, ಚಿತ್ರಾಪು ಮತ್ತಿತರ ಕಡೆಗಳಲ್ಲಿ ಡ್ರಗ್ಸ್ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಶಾಲಾ ಮಕ್ಕಳಿಗೆ ಡ್ರಗ್ಸ್ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದರು
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಭೀಮಾ ಶಂಕರ್, ಬಾಲಚಂದ್ರ ಕಾಮತ್ ಮಾತನಾಡಿ ಮುಲ್ಕಿ ಹೆದ್ದಾರಿ ಅಪಾಯಕಾರಿ ಜಂಕ್ಷನ್ ಬಳಿ ರಸ್ತೆ ದಾಟಲು ಪಾದಾಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆ, ಈ ಬಗ್ಗೆ ಅನೇಕ ಬಾರಿ ಟ್ರಾಫಿಕ್ ಪೊಲೀಸರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.ಹೆದ್ದಾರಿ ಬದಿ ಅಪಾಯಕಾರಿಯಾಗಿರುವ ಸರಕಾರಿ ಬಸ್ ನಿಲುಗಡೆಯನ್ನು ಲಯನ್ಸ್ ಕ್ಲಬ್ ಕಟ್ಟಡದ ಬಳಿ ಸ್ಥಳಾಂತರಿಸಲು ಹಾಗೂ ಶನಿವಾರ ಕಾರ್ನಾಡ್ ಸಂತೆ ಬಳಿ ಟ್ರಾಫಿಕ್ ಪೊಲೀಸರ ನಿಯೋಜನೆಯಾಗಬೇಕು ಎಂದು ಒತ್ತಾಯಿಸಿದರು.
ಕೊಲ್ನಾಡ್ ಕೈಗಾರಿಕಾ ಪ್ರದೇಶದಲ್ಲಿ ಅನಾಮಧೇಯ ವ್ಯಕ್ತಿಗಳು ಸುತ್ತಾಡುತ್ತಿದ್ದು ಸೂಕ್ತ ಗುರುತು ಚೀಟಿ ಮುಖಾಂತರ ಪತ್ತೆ ಹಚ್ಚುವ ಕೆಲಸವಾಗಬೇಕು ಎಂದು ಸದಸ್ಯ ಹರ್ಷರಾಜ ಶೆಟ್ಟಿ ಹೇಳಿದರು
ಮುಲ್ಕಿ ಪೊಲೀಸ್ ಠಾಣೆಯ ಎಸ್ ಐ ಅನಿತಾ ಮಾತನಾಡಿ ಠಾಣಾ ವ್ಯಾಪ್ತಿಯಲ್ಲಿ 27 ಸೂಕ್ಷ್ಮ ಪ್ರದೇಶಗಳಿದ್ದು ಎಲ್ಲಾ ಕಡೆ ಸಿಸಿ ಕೆಮರಾ ಅಳವಡಿಸಲು ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಚಿಂತನೆ ನಡೆಸಲಾಗಿದ್ದು , ನ.ಪಂ. ಸಹಕಾರ ಬೇಕು ಎಂದರು.
ನಗರ ಪಂಚಾಯತ್ ಸಭೆಗೆ ಅಧಿಕಾರಿಗಳ ಗೈರು ಬಗ್ಗೆ ಸದಸ್ಯ ಮಂಜುನಾಥ ಕಂಬಾರ ಅಸಮಾಧಾನ ವ್ಯಕ್ತಪಡಿಸಿದರು. ಮತದಾರರ ಪರಿಷ್ಕರಣೆ ಬಗ್ಗೆ ಸರಕಾರದ ಸೂಚನೆ ನೀಡಿದರೂ ನ.ಪಂ. ಸಿಬ್ಬಂದಿಗಳು ಬೇಜವಾಬ್ದಾರಿ ವಹಿಸಿದ್ದಾರೆ ಎಂದು ಸದಸ್ಯೆ ವಿಮಲಾ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು
ಎಸ್. ಎಫ್. ಸಿ ಅನುದಾನದಲ್ಲಿ ಕಳೆದ ವರ್ಷ ನೀಡಲಾದ ವಿದ್ಯಾರ್ಥಿ ವೇತನದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಸದಸ್ಯೆ ವಂದನಾ ಕಾಮತ್ ದೂರಿದರು
ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಬಾಬು ಜಗಜೀವನ್ ರಾಮ್ ಗ್ರಂಥಾಲಯ ಅವ್ಯವಸ್ಥೆ ಸರಿಪಡಿಸಬೇಕು, ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಬೀಳುವ ಸ್ಥಿತಿಯಲ್ಲಿದ್ದು ಸರಿಪಡಿಸಬೇಕು, ಬೀದಿ ನಾಯಿ ಹಾವಳಿ ನಿಯಂತ್ರಿಸಬೇಕು ಎಂದು ಸದಸ್ಯ ಭೀಮಾಶಂಕರ್ ಒತ್ತಾಯಿಸಿದರು
ಎಸ ಎಫ್ ಸಿ ಯೋಜನೆಯಡಿ ಮನೆ ದುರಸ್ತಿಗೆ ಅರ್ಜಿಗಳು ಬಂದಿದ್ದು ಪರಿಶೀಲನೆ ನಡೆಸಿ ಅರ್ಹರಿಗೆ ಹಣ ಬಿಡುಗಡೆ, ವಿಕಲಚೇತನರ ದೈಹಿಕ ದುರ್ಬಲತೆ ಬಗ್ಗೆ ಶೇಕಡಾವಾರು ಸರ್ಟಿಫಿಕೇಟ್ ನೀಡುವ ವ್ಯವಸ್ಥೆ ಮುಲ್ಕಿ ನ ಪಂ ನಲ್ಲಿ ನಡೆಯಬೇಕು ಎಂಬ ಒತ್ತಾಯ ಕೇಳಿ ಬಂತು
ಮುಲ್ಕಿ ನ. ಪಂ. ಹಾಗೂ ಹಳೆಯಂಗಡಿ ಗ್ರಾ.ಪಂ.ಗೆ ಮಂಗಳೂರು ನಗರ ಪಾಲಿಕೆಯ ತುಂಬೆಯಿಂದ ಕುಡಿಯುವ ನೀರು ಬರುತ್ತಿದ್ದು ಈ ನಡುವೆ ಹಳೆಯಂಗಡಿ ಗ್ರಾ.ಪಂ ಕುಡಿಯುವ ನೀರಿನ ಬಿಲ್ ಬಾಕಿ 80 ಲಕ್ಷ ಬಾಕಿ ಇರಿಸಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಪುತ್ತು ಬಾವ ಒತ್ತಾಯಿಸಿದರು
ಇದಕ್ಕೆ ಎಲ್ಲಾ ಸದಸ್ಯರು ಒಮ್ಮತ ವ್ಯಕ್ತಪಡಿಸುದಾಗ ಮುಖ್ಯಾಧಿಕಾರಿ ಮಧುಕರ್ ಮಾತನಾಡಿ ಹಳೆಯಂಗಡಿ ಪಂಚಾಯಿತಿಗೆ ನೋಟಿಸ್ ನೀಡಿ ಮುಂದಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ನಪಂ ವ್ಯಾಪ್ತಿಯಲ್ಲಿ ಅಳವಡಿಸಲಾದ ಬ್ಯಾನರ್ ಮತ್ತು ಫ್ಲೆಕ್ಸ್ ದರವನ್ನು ಪನಿಷ್ಕರಣೆ ಮಾಡಲು ನಿರ್ಧರಿಸಲಾಯಿತು ಹಾಗೂ ಅನಧಿಕೃತ ಬ್ಯಾನರ್ ಅಳವಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.
ಘನ ತ್ಯಾಜ್ಯ ನಿರ್ವಹಣೆ ಉಪನಿಯಮ 2019ನ್ನು ನಗರ ಪಂಚಾಯತಿಯಲ್ಲಿ ಅಳವಡಿಸುವ ಬಗ್ಗೆ ಮುಖ್ಯಾಧಿಕಾರಿ ಮಧುಕರ್ ಮಾಹಿತಿ ನೀಡಿದರು
ಮುಲ್ಕಿ ಬಸ್ ನಿಲ್ದಾಣದಿಂದ ಮಾರುಕಟ್ಟೆ ವರೆಗೆ ವಾಹನಗಳನ್ನು ಅಡ್ಡಾದಿಡ್ಡಿ ನಿಲುಗಡೆ ಬಗ್ಗೆ ಸೂಕ್ತ ಕ್ರಮ, ಪಡುಬೈಲು ಘಜನಿ ಬಳಿ ಅಣೆಕಟ್ಟು ನಿರ್ವಹಣೆಯಿಲ್ಲದೆ ಗದ್ದೆಗೆ ಉಪ್ಪು ನೀರು ನುಗ್ಗಿ ಕೃಷಿ ಹಾನಿ, ಮುಲ್ಕಿ ನ ಪಂ.ನಲ್ಲಿ ಸರಿಯಾದ ಇಂಜಿನಿಯರ್, ಆರೋಗ್ಯಾಧಿಕಾರಿ, ಇಲ್ಲದೆ ಜನಸಾಮಾನ್ಯರಿಗೆ ತೊಂದರೆ, ಕಸ ತ್ಯಾಜ್ಯ ವಿಲೇವಾರಿ ಸರಿಯಾಗಿಲ್ಲ, ಸ್ಟ್ಯಾಂಪ್ ಡ್ಯೂಟಿ ನಗರ ಪಂಚಾಯತ್ ಗೆ ಬರ್ತಾ ಇಲ್ಲ, ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳ ಬಗ್ಗೆ ಮುಲ್ಕಿ ವಲಯದ ಬ್ಯಾಂಕುಗಳ ಸಹಕಾರ ನೀಡ್ತಾ ಇಲ್ಲ, ಉಡುಪಿ ಜಿಲ್ಲೆಯ ಹೆಜಮಾಡಿ ಟೋಲ್ ನಿಂದ ಗಡಿ ಭಾಗದ ಮುಲ್ಕಿ ನ.ಪಂ ವ್ಯಾಪ್ತಿಯ ಬಪ್ಪನಾಡು ಚಂದ್ರಶಾನುಭಾಗ ಕುದ್ರು ನಾಗರಿಕರಿಗೆ ತೊಂದರೆ, ನಗರ ಪಂಚಾಯತ್ ನಲ್ಲಿ ಜನಸಾಮಾನ್ಯರ ಜೊತೆ ಸಿಬ್ಬಂದಿಗಳ ಸ್ಪಂದನೆ ಸರಿಯಾಗಿಲ್ಲ,ಬಗ್ಗೆ ಚರ್ಚೆ ನಡೆಯಿತು
ಕೆಎಸ್ ರಾವ್ನಗರ ನೂತನ ಅಂಗನವಾಡಿ ಗುದ್ದಲಿ ಪೂಜೆಗೆ ಸ್ಥಳೀಯ ಸದಸ್ಯರನ್ನು ಆಮಂತ್ರಿಸಿಲ್ಲ ಹಾಗೂ ಇದೇ ಸ್ಥಳದಲ್ಲಿ ಕಳೆದ ವರ್ಷಗಳ ಹಿಂದೆ ಎಸ್ಸಿ ಎಸ್ಟಿ ಅನುದಾನದಲ್ಲಿ ಮಕ್ಕಳ ಕ್ರೀಡೆಗೆ ಜಾಗ ಮೀಸಲಿಟ್ಟಿದ್ದು ಪರಿಶೀಲನೆ ನಡೆಸಬೇಕು ಎಂದು ಸದಸ್ಯ ಮಂಜುನಾಥ ಕಂಬಾರ ಒತ್ತಾಯಿಸಿದರು.
ಸಭೆಯಲ್ಲಿ ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ಹರ್ಷರಾಜ ಶೆಟ್ಟಿ ಯವರನ್ನು ಆಯ್ಕೆ ಮಾಡಲಾಯಿತು
ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮಿ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು