ಮಹಾನಗರದಲ್ಲಿ ತುಳು ಕನ್ನಡಿಗರ ಸಾಮಾಜಿಕ ಸೇವೆ ಶ್ಲಾಘನೀಯ: ಏಕನಾಥ್ ಶಿಂಧೆ
ಮುಂಬಯಿ: ನಗರದ ಯುವ ಬರಹಗಾರ ಸಂಘಟಕ ಪ್ರಭಾಕರ ಬೆಳುವಾಯಿ ಇವರ ಸಾರಥ್ಯದ “ನಮನ ಫ್ರೆಂಡ್ಸ್ ಮುಂಬಯಿ” ಇದರ 20ನೇ ವಾರ್ಷಿಕೋತ್ಸವ “ನಮನೋತ್ಸವ -2025 ಅದ್ದೂರಿ ಕಾರ್ಯಕ್ರಮವು “ರಾಷ್ಟ್ರ ಪ್ರೇಮ -ಮಾತೃ ಪ್ರೇಮ – ಕಲಾ ಪ್ರೇಮ” ಎಂಬ ಪರಿಕಲ್ಪನೆಯಡಿ ಇದೇ ಬರುವ ಜನವರಿ 26ರ ರವಿವಾರ ಗಣರಾಜ್ಯೋತ್ಸವ ದಿನದಂದು ಕುರ್ಲಾ ಪೂರ್ವದ ಬಂಟರ ಭವನ ಸಭಾಗೃಹದಲ್ಲಿ ಜರಗಲಿದೆ.
ಈ ನಿಟ್ಟಿನಲ್ಲಿ ವಿಶೇಷ ಅತಿಥಿಯಾಗಿ ಮಹಾರಾಷ್ಟ್ರ ಘನ ಸರಕಾರ ನಿಕಟಪೂರ್ವ ಮುಖ್ಯಮಂತ್ರಿ, ಹಾಗೂ ಪ್ರಸ್ತುತ ಉಪ ಮುಖ್ಯಮಂತ್ರಿಯಾಗಿರುವ ಶಿವಸೇನೆಯ ಏಕನಾಥ್ ಶಿಂಧೆ ಇವರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಲು ಆಹ್ವಾನ ಪ್ರತಿಯನ್ನು ನೀಡಿ ವಿನಂತಿಸಲಾಯಿತು. ಡಿ.31 ರ ಮಂಗಳವಾರದಂದು ಥಾಣೆ ಪಶ್ಚಿಮದ ತಲಾವು ಪಾಲಿ ಧರ್ಮವೀರ್ ಆನಂದ ದಿಘೆ ಮೈದಾನ ವೇದಿಕೆಯಲ್ಲಿ ಜರಗಿದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಹಾರಾಷ್ಟ್ರ ಸರಕಾರದ ಉಪ ಮುಖ್ಯಮಂತ್ರಿ ಎಕನಾಥ್ ಶಿಂಧೆ ಇವರನ್ನು ನಮನ ಫ್ರೆಂಡ್ಸ್ ಮುಂಬಯಿ ಸಂಸ್ಥಾಪಕ ಪ್ರಭಾಕರ ಬೆಳುವಾಯಿ ಇವರು ಭೇಟಿಯಾಗಿ ಆಹ್ವಾನ
ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ಶಿಂಧೆಯವನ್ನು ಪ್ರಭಾಕರ ಬೆಳುವಾಯಿ ಇವರು ನಮನ ಫ್ರೆಂಡ್ಸ್ ಮುಂಬಯಿ ಪರವಾಗಿ ಶಾಲು ಹೊದಿಸಿ ನೆನಪಿನ ಕಾಣಿಕೆಯಿತ್ತು ಗೌರವಿಸಿದರು.
ಈ ಸಂದರ್ಭದಲ್ಲಿ ಶಿಂಧೆಯವರು ನಮನೋತ್ಸವ 2025 ಕಾರ್ಯಕ್ರಮದ ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ಮುಂಬಯಿ ಮಹಾನಗರದಲ್ಲಿ ತುಳು ಕನ್ನಡಿಗರ ಸಮಾಜಮುಖಿ ಸೇವಾ ಕಾರ್ಯಗಳು ಗಮನಾರ್ಹವಾಗಿದೆ. ಮಾತ್ರವಲ್ಲದೆ ತುಳು ಕನ್ನಡಿಗರಿಗೆ ನನ್ನ ಪ್ರೋತ್ಸಾಹ ಸದಾ ಇದೆ. ವಿಶಿಷ್ಟ ಪರಿಕಲ್ಪನೆಯ ನಮನೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲಿ ಈ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುವೆ ಎಂಬ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಥಾಣೆಯ ಮಾಜಿ ಮೇಯರ್, ಥಾಣೆ ಜೆಲ್ಲೆ ಶಿವಸೇನಾ ಮಹಿಳಾ ಅಘಾಡಿ ಮುಖ್ಯಸ್ಥೆ ಮೀನಾಕ್ಷಿ ಶಿಂದೆ, ಕಲ್ಯಾಣ್ ಜಿಲ್ಲಾ ಪ್ರಮುಖರಾದ ಗೋಪಾಲ್ ಲಾಂಡ್ಗೆ, ಸಚಿವ ವಿಲಾಸ್ ಜೋಶಿ ಮಾಜಿ ನಗರ ಸೇವೆಕ ಸುಧೀರ್ ಕೊಕಟೆ, ಸಂಸದ ನರೇಶ್ ಮಸ್ಕೆ, ಶಾಸಕ ರವೀಂದ್ರ ಪಾಠಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮೀನಾಕ್ಷಿ ಶಿಂಧೆ ಇವರು ಆಹ್ವಾನ ಪ್ರತಿಯನ್ನು ನೀಡಿ ಆಮಂತ್ರಿಸಲಾಯಿತು.
ಜ.26 ರಂದು ಜರಗಲಿರುವ ನಮಾನೋತ್ಸವ ಕಾರ್ಯಕ್ರಮದಲ್ಲಿ ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಯ ಮುಖಾಮುಖಿಯಲ್ಲಿ ಗುಂಡೇಟಿಗೆ ಬಲಿಯಾಗಿ ತನ್ನೆರಡು ಕಾಲುಗಳನ್ನು ಕಳೆದುಕೊಂಡು ಜೀವನ್ಮರಣ ಹೋರಾಟ ನಡೆಸಿ ಬದುಕುಳಿದ ಕರ್ನಾಟಕ ಮೈಸೂರಿನ ಯೋಧರೊಬ್ಬರಿಗೆ ವಿಶೇಷ ಗೌರವ ಸನ್ಮಾನ ಸೇರಿದಂತೆ ನಗರ ಹಾಗೂ ತವರೂರ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನೆರವೇರಲಿದೆ.