ಬೆಂಗಳೂರು: ಪರಿಶುದ್ಧತೆಗೆ ಇಡೀ ದೇಶದಲ್ಲೇ ಹೆಸರು ಮಾಡಿರುವ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಈಗ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಹಾಲು, ಸ್ವೀಟ್, ಜ್ಯೂಸ್, ಹಾಲಿನ ಇತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಪೂರೈಸುವ ನಂದಿನಿ ಈಗ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ.
ನಂದಿನಿ ಬ್ರಾಂಡ್‌ನ ಇಡ್ಲಿ, ದೋಸೆಯ ಸಿದ್ಧ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಈಗ ಕೆಎಂಎಫ್ ಸಜ್ಜಾಗಿದೆ. ಹೊಸ ಉತ್ಪನ್ನಗಳು 10 ದಿನಗಳೊಳಗೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. ಮೊದಲ ಹಂತದಲ್ಲಿ ಪ್ರತಿದಿನ 10 ಸಾವಿರದಿಂದ 20 ಸಾವಿರ ಕೆ.ಜಿ. ಹಿಟ್ಟನ್ನು ಬೆಂಗಳೂರು ನಗರದಲ್ಲಿ ಮಾರಾಟ ಮಾಡಲಾಗುತ್ತದೆ. ಇದಕ್ಕಾಗಿಯೇ ಜಯನಗರದಲ್ಲಿ ಪ್ಯಾಕಿಂಗ್ ಘಟಕ ಒಂದನ್ನು ತೆರೆಯಲಾಗಿದೆ. ಸಿದ್ಧ ಹಿಟ್ಟು ಮಾರಾಟಕ್ಕೆ ಈಗಾಗಲೇ ಪ್ರಾಯೋಗಿಕ ಪರೀಕ್ಷೆಗಳು ಪೂರ್ಣಗೊಂಡಿವೆ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಇಡ್ಲಿ ಮತ್ತು ದೋಸೆಯ ಸಿದ್ದ ಹಿಟ್ಟಿನ ದರಕ್ಕಿಂತ ಕಡಿಮೆ ಬೆಲೆಗೆ ನಂದಿನಿ ಬ್ರಾಂಡ್‌ನ ಇಡ್ಲಿ ಮತ್ತು ದೋಸೆಯ ಹಿಟ್ಟು ಗ್ರಾಹಕರಿಗೆ ಸಿಗಲಿದೆ. ಎರಡನೇ ಹಂತದಲ್ಲಿ ರಾಜ್ಯದಾದ್ಯಂತ ಮಾರಾಟ ವಿಸ್ತರಿಸಲಾಗುವುದು’ ಎಂದು ಅವರು ಹೇಳಿದ್ದಾರೆ.
‘ದೋಸೆ-ಇಡ್ಲಿ ಹಿಟ್ಟು 450 ಗ್ರಾಂ ಹಾಗೂ 900 ಗ್ರಾಂ ಪ್ಯಾಕೆಟ್‌ಗಳಲ್ಲಿ ಮಾರುಕಟ್ಟೆಗೆ ಬರಲಿದೆ. ದೋಸೆ, ಇಡ್ಲಿ ಹಿಟ್ಟು ದರ ಎಷ್ಟು ಎಂಬುದು ಇನ್ನೂ ನಿಗದಿಯಾಗಿಲ್ಲ’ ಎಂದು ಅವರು ತಿಳಿಸಿದ್ದಾರೆ. ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಮಾರಂಭ ಆಯೋಜಿಸಲು ಮುಖ್ಯಮಂತ್ರಿಯವರ ಸಮಯ ಕೋರಲಾಗಿದೆ. ಮುಖ್ಯಮಂತ್ರಿಯವರು ಸಮಯಾವಕಾಶ ನೀಡಿದ ಬಳಿಕ ಉತ್ಪನ್ನಗಳ ಬಿಡುಗಡೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.