ಮೂಡುಬಿದಿರೆ: ಸಮಾಜ ಸುಧಾರಕರಾಗಿ ನಾರಾಯಣ ಗುರು ಒಂದು ಜಾತಿ ಧರ್ಮದ ಗುರುವಲ್ಲ, ಅವರು ಹೇಳಿದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವುದು ಮನುಷ್ಯ ಧರ್ಮದ ಸಾರ. ಚತುರ್ವರ್ಣ ಕರಾಳ ವ್ಯವಸ್ಥೆಯ ವಿರುದ್ಧದ ಹೋರಾಟವೇ ನಾರಾಯಣ ಗುರುಗಳ ಸಮಾಜ ಸುಧಾರಣೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಯುವವಾಹಿನಿ ಮೂಡುಬಿದಿರೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಆಯೋಜಿಸಿದ್ದ ಶ್ರೀ ನಾರಾಯಣಗುರು ಜಯಂತಿ ಪ್ರಯುಕ್ತ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಶ್ರೀ ನಾರಾಯಣ ಗುರುಗಳ ಭಾವಚಿತ್ರ ರಚನೆ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯ ʻಗುರು ಸ್ಮರಣೆʼ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾರಾಯಣ ಗುರುಗಳ ಧಾರ್ಮಿಕ ಸುಧಾರಣಾ ಚಳುವಳಿ, ಬೇರೆ ಬೇರೆ ಚಳುವಳಿಗಾರರ ಚಳುವಳಿಗಿಂತ ಭಿನ್ನವಾಗಿದ್ದವು. ಯುದ್ಧಕ್ಕೆ ಬಂದವರನ್ನು ಶಸ್ತ್ರವಿಲ್ಲದೆ ಹಿಮ್ಮೆಟ್ಟಿಸಿದ ಕೀರ್ತಿ ಅವರದ್ದು. ಪೂಜೆಗಾಗಿ ಕೆಳಜಾತಿಯವರನ್ನು ನೇಮಿಸಿದ ಅವರು, ವಿವಾಹಗಳನ್ನು ಸರಳಗೊಳಿಸಿ, ಮದ್ಯಪಾನದ ವಿರುದ್ಧ ಹೋರಾಟ ನಡೆಸಿದರು. ಅವರ ಜೀವನದಲ್ಲಿ ನಡೆದ ನೈಜ ಘಟನೆಯೊಂದಿಗೆ ಅವರು ಜಾತಿ ಪದ್ಧತಿ ವಿರುದ್ಧ ಹೋರಾಟ ನಡೆಸಿದ ಸಂದರ್ಭವನ್ನು ವಿವರಿಸಿದರು. ಇಂದಿನ ಜಯಂತಿಗಳು ಜಾತಿಯ ಆಧಾರದಲ್ಲಿ ನಡೆಯುತ್ತಿರುವ ಕುರಿತು ವಿಷಾಧ ವ್ಯಕ್ತಪಡಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ. ಪೂಜಾರಿ, ನಿಶ್ಮಿತಾ ಸಂಸ್ಥೆಯ ಅಧ್ಯಕ್ಷ ನಾರಾಯಣ ಪಿ.ಎಂ., ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ., ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಅಶೋಕ್. ಬಿ. ಉಪಸ್ಥಿತರಿದ್ದರು.
ಯುವವಾಹಿನಿಯ ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ವಂದಿಸಿದರು. ಹನಿ ಆನಂದ್ ಕಾರ್ಯಕ್ರಮ ನಿರೂಪಿಸಿದರು. ನಾರಾಯಣಗುರುಗಳ ಭಾವಚಿತ್ರ ರಚನೆ ಸ್ಪರ್ಧೆಯಲ್ಲಿ 700 ವಿದ್ಯಾರ್ಥಿಗಳು, ಪ್ರಬಂಧ ಸ್ಪರ್ಧೆಗೆ 162, ಭಾಷಣ ಸ್ಪರ್ಧೆಗೆ 60 ಸೇರಿದಂತೆ 925 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
