ಮಂಗಳೂರು: ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯ್ಯಾಪಕರಾಗಿ, ಸಹಸ್ರಾರು ವೈದ್ಯಕೀಯ ಲೇಖನಗಳ ಪತ್ರಿಕಾ ಅಂಕಣಕಾರರಾಗಿ, ಹತ್ತಾರು ವೈದ್ಯಕೀಯ ಜಾಗೃತಿ ಪುಸ್ತಕಗಳನ್ನು ಬರೆದು ಪ್ರಕಟಿಸಿ ವೈದ್ಯ ಸಾಹಿತಿಯೆಂದೆನಿಸಿ, ಸಾಹಿತ್ಯ, ಸಂಸ್ಕೃತಿ, ಕಲೆ, ವೈದ್ಯಕೀಯ ಸೇವೆಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಹತ್ತು ಹಲವಾರು ಸಂಘ-ಸಂಸ್ಥೆಗಳಿಂದ ಸನ್ಮಾನ ಪಡೆದು ಒಂದು ದಶಕದಿಂದ ದ.ಕ.ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟನಾಗಿ ಯಶಸ್ವೀ ಸೇವೆ ಸಲ್ಲಿಸಿ, ರಾಷ್ಟ್ರಪತಿಗಳಿಂದ ಶ್ಲಾಘನೀಯ ಸೇವಾ ಪದಕ ಪಡೆದು ಪುರಸ್ಕøತರಾದ ಡಾ|| ಮುರಲೀಮೋಹನ್ ಚೂಂತಾರು ಇವರಿಗೆ ರೋಟರಿ ಸಂಸ್ಥೆಯಿಂದ ರಾಷ್ಟ್ರ ನಿರ್ಮಾಣದಲ್ಲಿ ಶ್ರಮಿಸಿದ ಸಾಧಕರಿಗೆ ಕೊಡಮಾಡುವ “ನೇಷನ್ ಬಿಲ್ಡರ್ ಅವಾರ್ಡ್-2024” ಅನ್ನು ನೀಡುವುದು ನಮಗೆಲ್ಲಾ ಅತೀ ಸಂತಸದ ವಿಷಯವೆಂದು ಕೆ.ಎಂ.ಸಿ. ಮಂಜೀ ಡೀನ್ ಡಾ|| ರಘುವೀರ್ ರವರು ಸೆ.10 ರಂದು ಮಂಗಳೂರು ನಗರದ ರೋಟರಿ ಬಾಲಭವನದಲ್ಲಿ ಜರಗಿದ ಗುರುವಂದನಾ ಕಾರ್ಯಕ್ರಮದಲ್ಲಿ ನುಡಿದರು. ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದ ಈ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿದ ಡಾ|| ಮುರಲೀಮೋಹನ್ ಚೂಂತಾರು ರವರು ತನಗೆ ನೀಡಿದ ಈ ರಾಷ್ಟ್ರ ನಿರ್ಮಾಣ ಪ್ರಶಸ್ತಿಯ ಗೌರವವನ್ನು ಸ್ವೀಕರಿಸುತ್ತಾ, ಈ ಗೌರವ ಶಿಕ್ಷಣ ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಮಹಾನ್‍ಚೇತನಗಳಿಗೆ ಅರ್ಪಣೆಯೆಂದರು ಹಾಗೂ ಈ ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಯಶೋದಾ, ಶ್ರೀಮತಿ ಫ್ಲಾವಿ ಮಸ್ಕರೇನಸ್, ಶ್ರೀಮತಿ ಇಂದ್ರಾವತಿ ಮತ್ತು ಶ್ರೀಮತಿ ಜೆಸಿಂತಾ ರಾಡ್ರಿಗಸ್ ರವರನ್ನು ರೋಟರಿ ಪರವಾಗಿ ಸನ್ಮಾನಿಸಿ ಗೌರವಿಸಿದರು. ಈ ಸನ್ಮಾನ ಕಾರ್ಯಕ್ರಮವನ್ನು ರೋಟರಿ ಮಾಜಿ ಗವರ್ನರ್, ರೋ. ಕೆ. ಕೃಷ್ಣ ಶೆಟ್ಟಿ, ರೋಟರಿ ಜಿಲ್ಲಾ ಕಾರ್ಯದರ್ಶಿ (ತರಬೇತಿ) ಡಾ|| ಶಿವಪ್ರಸಾದ್, ರೋಟರಿ ಸಹಾಯಕ ಗವರ್ನರಾದ ವಿಶ್ವನಾಥ ಶೆಟ್ಟಿ ಇವರು ನೆರವೇರಿಸಿದರು.
ವೇದಿಕೆಯಲ್ಲಿ ಕ್ಲಬ್ ಅಧ್ಯಕ್ಷ ಮೋಹನ್ ನಾಯರ್, ಗಣೇಶ ಕೃಷ್ಣ ಭಟ್, ನಿಯೋಜಿತ ಅಧ್ಯಕ್ಷ, ಡಾ|| ಅರುಣ್ ಕುಮಾರ್ ಶೆಟ್ಟಿ, ಶಿಕ್ಷಕರನ್ನು ಪರಿಚಯಿಸಿದ ಬುಲೆಟಿನ್ ಸಂಪಾದಕ ಅಜಿತ್ ರಾವ್, ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಡಾ|| ರಘುವೀರ್, ಅತಿಥಿ ಪರಿಚಯ ಡಾ|| ಶಿವಪ್ರಸಾದ್ ಹಾಗೂ ಶಿಕ್ಷಕರ ಪರಿಚಯವನ್ನು ಅಜಿತ್ ರಾವ್ ನೆರವೇರಿಸಿದರು. ಡಾ|| ಸತೀಶ್ ಕುಮಾರ್ ಶೆಟ್ಟಿ ವಂದನಾರ್ಪಣೆಗೈದರು.