ಆರ್‌ಎಸ್‌ಎಸ್‌ನಿಂದ ರಾಷ್ಟ್ರ ನಿರ್ಮಾಣ – ಕೊಡವೂರಿನಲ್ಲಿ ಕುಟುಂಬ ಮಿಲನ ಕಾರ್ಯಕ್ರಮ

0
44

ಕೊಡವೂರು : ಕೊಡವೂರಿನಲ್ಲಿ ನಡೆದ ಕುಟುಂಬ ಮಿಲನ ಕಾರ್ಯಕ್ರಮವು ದೇಶದ ಸೇವೆಗಾಗಿ ಶ್ರಮಿಸುವವರನ್ನು ಗೌರವಿಸುವ ಹಾಗೂ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ನಡೆಯಿತು. ಕೊಡವೂರಿನ ಅಮೀನ್ ಅವರ ಮನೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿಕಟಪೂರ್ವ ನಗರಸಭಾ ಸದಸ್ಯರಾದ ಕೆ. ವಿಜಯ ಕೊಡವೂರು ಅವರು, “ನಮ್ಮೊಂದಿಗೆ ಬದುಕುವ ದೀನದಲಿತರು, ದುರ್ಬಲರು ಹಾಗೂ ಸಂಕಷ್ಟದಲ್ಲಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಮತ್ತು ಅವರಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದರು.

ಉಡುಪಿ ಸಮೀಪದ ಉಪ್ಪೂರು ಭಾಗದಲ್ಲಿರುವ ಸ್ಪಂದನ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಕಳೆದ 25 ವರ್ಷಗಳಿಂದ ಜನಾರ್ದನ್ ಎನ್. ಅವರು ಸೇವಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಬೆಳೆದ ಅವರು, ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂಬ ಸೇವಾ ಮನೋಭಾವದಿಂದ 50ಕ್ಕೂ ಅಧಿಕ ಬುದ್ಧಿಮಾಂದ್ಯ ಮಕ್ಕಳ ಆರೈಕೆ ಮತ್ತು ಪೋಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇಂತಹ ಸೇವಾ ಮನೋಭಾವದ ಸ್ವಯಂಸೇವಕರನ್ನು ರೂಪಿಸುವಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಾತ್ರ ಮಹತ್ವದ್ದಾಗಿದೆ. ಸಂಘವು ಹಿಂದೂ ಸಮಾಜದ ಸಂಘಟನೆ, ರಾಷ್ಟ್ರಭಕ್ತಿ ಹಾಗೂ ಸೇವಾ ಮನೋಭಾವಕ್ಕೆ ಆದ್ಯತೆ ನೀಡುತ್ತಾ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇಂತಹ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಕೆ. ವಿಜಯ ಕೊಡವೂರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶೇಖರ್ ಕೋಟ್ಯಾನ್, ಜನಾರ್ದನ್ ಎನ್., ವಾರಿಜಾ ಹಾಗೂ ಕೃಷ್ಣ ಅಮೀನ್ ಉಪಸ್ಥಿತರಿದ್ದರು.