ಪಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅ.11ರಿಂದ ನವರಾತ್ರಿ ಪೂಜೆ

0
54

ಪುತ್ತೂರು : ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಅಕ್ಟೋಬರ್ 11ರಿಂದ 20ರವರೆಗೆ ನವರಾತ್ರಿ ಪೂಜೆ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಪ್ರತಿದಿನ ಸಂಜೆ 6.30ರಿಂದ 7.45ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ–ಸಂಕೀರ್ತನೆ ನಡೆಯಲಿದೆ. ಅ.11ರಂದು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ನಾಗತೀರ್ಥ, ಅ.12ರಂದು ಶ್ರೀ ವಿಷ್ಣು ಭಜನಾ ಮಂಡಳಿ ಅಳ್ವೆ–ಚಿಂಗಾಣಿಗುಡ್ಡೆ, ಅ.13ರಂದು ಪಂಚಶ್ರೀ ಭಜನಾ ಮಂಡಳಿ ಪಂಬೆತ್ತಾಡಿ, ಅ.14ರಂದು ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪಾಡಿ–ಜೀರಿಗುಡ್ಡೆ, ಅ.15ರಂದು ಪಂಜ ವಲಯ ಹವ್ಯಕ ಮಹಿಳೆಯರು, ಅ.16ರಂದು ವನಿತಾ ಸಮಾಜ ಪಂಜ, ಅ.17ರಂದು ಶಿವಳ್ಳಿ ಸಂಪದ ಪಂಜ ವಲಯ, ಅ.18ರಂದು ಶ್ರೀ ಶಾರದಾಂಭಾ ಭಜನಾ ಮಂಡಳಿ ಪಂಜ, ಅ.19ರಂದು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೇನ್ಯ ಹಾಗೂ ಅ.20ರಂದು ಯುವ ಸ್ಫೂರ್ತಿ ಸೇವಾ ಸಂಘ ಕಲ್ಮಡ್ಡ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಪ್ರತಿದಿನ ರಾತ್ರಿ 8ರಿಂದ ವಿವಿಧ ಕಲಾ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಿಗಾನ, ತಬಲ–ಕೀಬೋರ್ಡ್ ವಾದನ, ಭರತನಾಟ್ಯ, ಕುಣಿತ ಭಜನೆ ಹಾಗೂ ಯಕ್ಷಗಾನ ನಾಟ್ಯ ವೈಭವ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆಯಲಿವೆ.

ನವರಾತ್ರಿ ಪ್ರಯುಕ್ತ ಕುಂಕುಮಾರ್ಚನೆ, ಹೂವಿನ ಪೂಜೆ, ಮಕ್ಕಳ ವಿಶೇಷ ಪೂಜೆ, ವಾಹನ ಪೂಜೆ, ದುರ್ಗಾಪೂಜೆ ಹಾಗೂ ನವರಾತ್ರಿ ಪೂಜೆ ಸೇರಿದಂತೆ ವಿವಿಧ ಸೇವೆಗಳು ನಡೆಯಲಿವೆ. ಪ್ರತಿದಿನ ಅನ್ನಸಂತರ್ಪಣೆಯ ವ್ಯವಸ್ಥೆಯೂ ಇರಲಿದೆ.

ಅಕ್ಟೋಬರ್ 20ರಂದು ಆಯುಧಪೂಜೆ ಪ್ರಯುಕ್ತ ವಾಹನ ಪೂಜೆ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಹಾಗೂ ಸಂಜೆ 5ರಿಂದ ರಾತ್ರಿ 9.30ರವರೆಗೆ ನಿರಂತರವಾಗಿ ನಡೆಯಲಿದೆ. ಉಳಿದ ದಿನಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಪೂಜೆಯ ಬಳಿಕ ವಾಹನ ಪೂಜೆ ನಡೆಯಲಿದೆ.

ನವರಾತ್ರಿ ಉತ್ಸವದ ಅಂಗವಾಗಿ ನಡೆಯುವ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಸ್ಥಾನದ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ಗೌರವ ಸಲಹೆಗಾರರು, ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.