ನಿತೀಶ್ ಗೆ ಉಪ ಪ್ರಧಾನಿ ಆಫರ್; ಟಿಡಿಪಿಗೆ ಆಂಧ್ರಕ್ಕೆ ವಿಶೇಷ ಸ್ಥಾನಮಾನದ ಕೊಡುಗೆ!
ನವದೆಹಲಿ: ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದೆ. ಪೂರ್ಣ ಬಹುಮತದತ್ತ ಎನ್ ಡಿಎ ಮೈತ್ರಿಕೂಟ ಸಾಗಿದ್ದರೂ, ದೊಡ್ಡ ಪಕ್ಷವಾಗಿ ಮೂಡಿಬಂದಿರುವ ಬಿಜೆಪಿಗೆ ದೊಡ್ಡ ತಲೆನೋವೊಂದು ತಲೆದೋರಿದೆ. ಬಿಜೆಪಿ ಏಕಾಂಗಿಯಾಗಿ ಬಹುಮತ ಸಾಧಿಸದಿರುವುದರಿಂದ ಬಿಜೆಪಿ ಮಿತ್ರ ಪಕ್ಷಗಳನ್ನು ತನ್ನತ್ತ ಸೆಳೆಯಲು ಇಂಡಿಯಾ ಒಕ್ಕೂಟದ ಮುಖಂಡರು ಮುಂದಾಗಿದ್ದಾರೆ ಎಂದು ವರದಿಗಳಾಗಿವೆ.
ಸದ್ಯದ ವರದಿಯ ಪ್ರಕಾರ ಎನ್ ಡಿಎ 295 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಇಂಡಿಯಾ ಮೈತ್ರಿಕೂಟ 231 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಹೀಗಾಗಿ ಬಹುಮತ ಸಾಧಿಸಲು ಇಂಡಿಯಾ ಮೈತ್ರಿಕೂಟ ಎನ್ ಡಿಎ ಬಳಗದಲ್ಲಿರುವ ಜೆಡಿಯು ಮತ್ತು ಟಿಡಿಪಿಗೆ ಬಲೆ ಬೀಸಲು ಮುಂದಾಗಿದೆ.
ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಗೆ ಉಪ ಪ್ರಧಾನಿ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಪಕ್ಷ ಆಂಧ್ರ ಪ್ರದೇಶದಲ್ಲಿ ಸರ್ಕಾರ ರಚಿಸಲಿರುವುದರಿಂದ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡುವ ಭರವಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಈ ಆಫರ್ ಅನ್ನು ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಒಪ್ಪಿಕೊಂಡರೆ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಲಿವೆ.
ಏಕಾಂಗಿಯಾಗಿ ಕಾಂಗ್ರೆಸ್ 99 ಮತ್ತು ಬಿಜೆಪಿ 243 ಸೀಟುಗಳನ್ನು ಗೆದ್ದಿವೆ. ಇಂದು ಅಂತಿಮ ಲೆಕ್ಕಾಚಾರವಲ್ಲ. ಸ್ವಲ್ಪ ಹೆಚ್ಚುಕಮ್ಮಿಯಾಗಿ ಇದೇ ಲೆಕ್ಕಾಚಾರ ಅಂತಿಮಗೊಳ್ಳಲಿದೆ.