ಮಂಗಳೂರು: ನೀಟ್ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ನಗರದ ಎಕ್ಸ್‌ಪರ್ಟ್ ಕಾಲೇಜಿನ ಅರ್ಜುನ್ ಕಿಶೋರ್ 720ರಲ್ಲಿ 720 ಅಂಕ ಗಳಿಸುವ ಮೂಲಕ ದೇಶಕ್ಕೇ ಮೊದಲ ಸ್ಥಾನ ಪಡೆದಿದ್ದಾರೆ. ಮೈಸೂರು ಮೂಲದ ಅರ್ಜುನ್ ನಗರದ ಹೊರವಲಯ ವಳಚ್ಚಿಲ್‌ನ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ವೈದ್ಯ ದಂಪತಿಯ ಪುತ್ರರಾಗಿರುವ ಅರ್ಜುನ್ ದೇಶಕ್ಕೇ ಪ್ರಥಮ ಸ್ಥಾನ ಪಡೆಯುವ ಮೂಲಕ ನಗರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮದ ಫಲವಾಗಿ ಈ ಸಾಧನೆ ಸಾಧ್ಯವಾಯಿತು. ಕಾಲೇಜಿನ ಬೋಧಕ ವೃಂದ ಮತ್ತು ಪೋಷಕರಿಂದ ಪ್ರೋತ್ಸಾಹ ಸಿಕ್ಕಿದೆ. ಮುಂದೆ ಸರ್ಜನ್ ಆಗುವ ಅಭಿಲಾಶೆಯಿದೆ ಎಂದು ಅರ್ಜುನ್ ಪ್ರತಿಕ್ರಿಯಿಸಿದ್ದಾರೆ.
ನೀಟ್‌ನಲ್ಲಿ ಅರ್ಜುನ್ ಕಿಶೋರ್ ಸೇರಿ ರಾಜ್ಯದ ಮೂವರು ದೇಶಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು 67 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದು, ಅವರಲ್ಲಿ 14 ಮಂದಿ ವಿದ್ಯಾರ್ಥಿನಿಯರಿದ್ದಾರೆ.