ಬೆಳ್ತಂಗಡಿ: ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಹಿಂದೂ ಸಂಪ್ರದಾಯದಂತೆ ಮದುವೆಯಾದ ವಿಶೇಷವಾದ ಘಟನೆ ನಡೆದಿದೆ.
ಮೂಡಬಿದ್ರೆಯ ಕಂಪ್ಯೂಟರ್ ಕ್ಲಾಸ್‌ಗೆಂದು ಹೋಗಿದ್ದ ನೆಲ್ಲಿಕಾರಿನ ಮುಸ್ಲಿಂ ಯುವತಿಯೊಬ್ಬಳು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಪ್ರಕರಣವು ಹೊಸ ತಿರುವು ಪಡೆದುಕೊಂಡಿದ್ದು, ತಾನು ಪ್ರೀತಿಸುತ್ತಿದ್ದ ಹಿಂದೂ ಯುವಕನೊಂದಿಗೆ ದೇವಸ್ಥಾನದಲ್ಲಿ ವಿವಾಹವಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.
ನೆಲ್ಲಿಕಾರಿನ ಸುಹಾನ (19) ನಾಪತ್ತೆಯಾಗಿದ್ದ ಯುವತಿ. ಈ ಕುರಿತು ಮೂಡಬಿದ್ರೆಯ ಪೊಲೀಸ್ ಠಾಣೆಗೆ ಯುವತಿಯ ಮನೆ ಮಂದಿ ದೂರು ನೀಡಿದ್ದರು.
ನಾಪತ್ತೆಯಾಗಿದ್ದ ಸುಹಾನ ಹಾಗೂ ಧರ್ಮಸ್ಥಳ ಸಮೀಪದ ಪಟ್ರಮೆಯ ಹರೀಶ್ ಗೌಡ (24) ನಡುವೆ ಕಳೆದ ಒಂದು ವರ್ಷದಿಂದ ಫೇಸ್‌ಬುಕ್ ಮೂಲಕ ಪರಿಚಯವಾಗಿ ಮುಂದೆ ಅವರಿಬ್ಬರ ನಡುವೆ ಪ್ರೇಮಾಂಕುರವಾಗಲು ಕಾರಣವಾಗಿತ್ತು. ಇಬ್ಬರು ವಿವಾಹವಾಗಲು ನಿರ್ಧಾರಕ್ಕೆ ಬಂದಿದ್ದರು. ಈ ಹಿನ್ನಲೆಯಲ್ಲಿ ಸುಹಾನ ಮನೆಮಂದಿಗೂ ತಿಳಿಸದೇ ಯುವಕನ ಸೂಚನೆಯಂತೆ ನೇರವಾಗಿ ಬೆಳ್ತಂಗಡಿ ಕಡೆಗೆ ಪ್ರಯಾಣ ಬೆಳೆಸಿದ್ದಳು.
ಮುಸ್ಲಿಂ ಯುವತಿ ಸುಹಾನ ತನ್ನ ಇಚ್ಚೆಯಂತೆ ಹಿಂದೂ ಸಂಪ್ರದಾಯ ಪ್ರಕಾರ ಹಿಂದೂ ಯುವಕನೊಂದಿಗೆ ವಿವಾಹವಾಗಿದ್ದಳು.
ದೇವಸ್ಥಾನದಲ್ಲಿ ಸುಹಾನ ಹಾಗೂ ಹರೀಶ್ ಗೌಡ ಹಾರ ಬದಲಾಯಿಸಿ ಕೊಂಡಿದ್ದಾರೆ. ಆ ಕ್ಷಣದಲ್ಲಿ ಸುಹಾನಳಿಗೆ ಹರೀಶ್ ಗೌಡ ಮಾಂಗಲ್ಯಧಾರಣೆ ಮಾಡಿದ್ದಾನೆ.
ನವದಂಪತಿ ನೇರವಾಗಿ ಬೆಳ್ತಂಗಡಿ ವಿವಾಹ ನೊಂದಾವಣಾ ಕಚೇರಿಗೆ ತೆರೆಳಿ, ಹಿಂದೂ ವಿವಾಹ ಕಾಯಿದೆಯ ಪ್ರಕಾರ ವಿವಾಹ ನೋಂದಾವಣೆಗೆ ಅರ್ಜಿ ಸಲ್ಲಿಸಿದ್ದಾರೆ.