Wednesday, April 23, 2025
HomeUncategorizedಒಳಮೀಸಲಾತಿಗಾಗಿ ಹೊಸ ಸಮೀಕ್ಷೆ: ಪರಿಶಿಷ್ಟರ ಮಹಾ ಒಕ್ಕೂಟ ಆಗ್ರಹ

ಒಳಮೀಸಲಾತಿಗಾಗಿ ಹೊಸ ಸಮೀಕ್ಷೆ: ಪರಿಶಿಷ್ಟರ ಮಹಾ ಒಕ್ಕೂಟ ಆಗ್ರಹ

‘ಎಲ್ಲರ ವೃತ್ತಿ, ಕೌಟುಂಬಿಕ ಆದಾಯದ ಡೇಟಾವನ್ನೂ ಸಂಗ್ರಹ ಮಾಡಿ’

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು ಎಂದು ಅಧಿಸೂಚಿತ 101 ಜಾತಿಗಳ ಜನರ ಸಾಮಾಜಿಕ – ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿ ಗತಿ ಬಗ್ಗೆ ನಿಖರವಾದ ಯಾವುದೇ ಡೇಟಾ ಇಲ್ಲದಿರುವುದರಿಂದ, ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಬಗ್ಗೆ ಶಿಫಾರಸ್ಸು ಮಾಡಲು ರಚಿಸಲಾದ ನ್ಯಾ. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗವೇ ಸ್ವತ ವಿಸ್ತ್ರತ ಸಮೀಕ್ಷೆ ನಡೆಸಬೇಕು ಎಂಬ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ – ಸಂಸ್ಥೆಗಳ ಮಹಾಒಕ್ಕೂಟದ ಬೇಡಿಕೆಗೆ ಆಯೋಗವು ಸಕಾರಾತ್ಮಕವಾಗಿ ಸ್ಪಂದಿಸಿದ್ದು,  ಈ ನಿಟ್ಟಿನಲ್ಲಿ ಸರಕಾರಕ್ಕೆ ಮಧ್ಯಮ್ತರ ವರದಿ ಸಲ್ಲಿಸಿದೆ. ಸರಕಾರವು ಅದನ್ನು ಅಂಗೀಕರಿಸಿ, ಹೊಸ ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸಿದೆ. ಇದು ಮಹಾಒಕ್ಕೂಟದ ನ್ಯಾಯಯುತ ಹೋರಾಟಕ್ಕೆ ಸಂದ ಮೊದಲ ವಿಜಯ. ಇದನ್ನು ಮಹಾಒಕ್ಕೂಟ ಸ್ವಾಗತಿಸುತ್ತದೆ.

ಒಳಮೀಸಲಾತಿಗೆ ಅಗತ್ಯವಾದ ನ್ಯಾಯ ಸಮ್ಮತ ವರ್ಗೀಕರಣ ಮಾಡಲು ಆಯೋಗವೇ ಹೊಸತಾಗಿ 101 ಜಾತಿಗಳ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಸ್ವತಃ  ಕೈಗೆತ್ತಿಗೊಳ್ಳಬೇಕು ಎಂದು ಮಹಾಒಕ್ಕೂಟವು ದಿ. 31.01.2025 ರಂದು ನ್ಯಾ. ನಾಗಮೋಹನ್ ದಾಸ್ ಆಯೋಗಕ್ಕೆ ಸಲ್ಲಿಸಿದ್ದ ವಿಸ್ತ್ರತ ಆಕ್ಷೇಪಣೆ/ ಅಹವಾಲು ನಲ್ಲಿ ಮತ್ತು ಮಹಾಒಕ್ಕೂಟದ ನಿಯೋಗ ಗೌರವಾನ್ವಿತ ನ್ಯಾ. ನಾಗಮೋಹನ್ ದಾಸ್ ಅವರನ್ನುಆಯೋಗದ ಬೆಂಗಳೂರು ಕಚೇರಿಯಲ್ಲಿ ಭೇಟಿ ಮಾಡಿ ಒತ್ತಾಯಿಸಿತ್ತು.

ಸರಕಾರಿ ಆಡಳಿತಯಂತ್ರದ ನೆರವಿನೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಮೀಕ್ಷೆ ನಡೆಸುವುದಕ್ಕೆ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಸಮಿತಿ ರಚನೆಗೆ ಕೂಡಾ ಸಚಿವ ಸಂಪುಟ ಒಪ್ಪಿಗೆ ನೀಡಿರುವುದರಿಂದ, ಈ ಹೊಸ ಸಮೀಕ್ಷೆಗಾಗಿ ಸಿದ್ಧಪಡಿಸುವ ಪ್ರಷ್ಣಾವಳಿಯಲ್ಲಿ 101 ಜಾತಿಗಳಿಗೆ ಸೇರಿದ ಜನರಲ್ಲಿ ಯಾವ್ಯಾವ ವೃತ್ತಿಗಳಲ್ಲಿ ಎಷ್ಟೆಷ್ಟು ಶೇಕಡಾ ಜನರು ಕೆಲಸ ಮಾಡುತ್ತಿದ್ದಾರೆ? ಅವರ ಕೌಟುಂಬಿಕ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿನ್ನೆಲೆ ಏನು? ಯಾವ್ಯಾವ ಆರ್ಥಿಕ ಹಿನ್ನೆಲೆಯ ಮಕ್ಕಳು ಯಾವ್ಯಾವ ಶಿಕ್ಷಣ ಸಂಸ್ಥೆಗಳಲ್ಲಿ,  ಎಂತಹ ಶಿಕ್ಷಣ ಪಡೆಯುತ್ತಿದ್ದಾರೆ? ಯಾರ ಉದ್ಯೋಗ ಏನು? ಕುಟುಂಬಗಳ ವಾರ್ಷಿಕ ಆದಾಯ ಎಷ್ಟು? ಎಂಬಿತ್ಯಾದಿಯಾಗಿ 101 ಜಾತಿಗಳಿಗೆ ಸೇರಿದ ಎಲ್ಲ ವರ್ಗಗಳ ಬದುಕಿಗೆ ಸೇರಿದ ಎಲ್ಲ ಅಂಶಗಳ ಬಗ್ಗೆ ಡೇಟಾ ಸಂಗ್ರಹಿಸಬೇಕು ಮತ್ತು ಹೀಗೆ ಸಂಗ್ರಹವಾದ ಡೇಟಾ ವನ್ನು ಸರಕಾರ / ಆಯೋಗ ಬಹಿರಂಗ ಪಡಿಸ ಬೇಕು ಎಂದು ಮಹಾ ಒಕ್ಕೂಟ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ನ್ಯಾ. ನಾಗಮೋಹನ್ ದಾಸ್ ಅವರನ್ನು ಆಗ್ರಹಿಸುತ್ತದೆ. 

ಹೀಗೆ ಸಂಗ್ರಹವಾದ ನಿಖರವಾದ ಡೇಟಾದ ಆಧಾರದಲ್ಲೇ ಪರಿಶಿಷ್ಟ ಜಾತಿಗಳಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ದುರ್ಬಲರಾಗಿ,  ಅಸಹಾಯಕರಾಗಿ ದಯನೀಯ  ಬದುಕು ನಡೆಸುತ್ತಿರುವ 101 ಜಾತಿಗಳಿಗೂ ಸೇರಿದ, ಅತ್ಯಂತ ಅಪಮಾನಕರವಾಗಿ ದುಡಿಯುವ ಶ್ರಮಜೀವಿ ವರ್ಗಕ್ಕೆ ವಿಶೇಷ ಆದ್ಯತೆಯಲ್ಲಿ ಮೀಸಲಾತಿಯನ್ನು ಖಾತರಿ ಮಾಡುವ ವಿನೂತನ ಒಳ ಮೀಸಲಾತಿ ನೀತಿ ಜಾರಿಗೆ ತರಬೇಕು ಎಂದು ಮಾದರಿ ಕರಡು ನೀತಿಯೊಂದನ್ನೂ ಮಹಾಒಕ್ಕೂಟ ಸಿದ್ಧಪಡಿಸಿ ನೀಡಿದೆ. ಇದರಂತೆಯೇ ಒಳ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹ ಪಡಿಸುತ್ತದೆ.

ಒಳ ಮೀಸಲಾತಿಗೆ ಅಗತ್ಯವಾದ ವರ್ಗೀಕರಣವನ್ನು ಜಾತೀಯ ಆಧಾರದಲ್ಲಿ ಜಾರಿಗೆ ತಂದದ್ದೇ ಆದಲ್ಲಿ, ಅದು ಎಡ ಗೈ – ಬಲ ಗೈ, ಸ್ಪರ್ಶ್ಯ –  ಆಸ್ಪರ್ಶ್ಯ ಎಂಬ ಬೇಧ ಭಾವ ಇಲ್ಲದೆ,  ಎಲ್ಲ ಪರಿಶಿಷ್ಟ ಜಾತಿಗಳಲ್ಲಿರುವ ವಿವಿಧ ಸ್ತರಗಳ – ಕ್ಷೇತ್ರಗಳ ಬಲಾಡ್ಯರೇ ಶಿಕ್ಷಣ ಮತ್ತು ಸರಕಾರ ಮತ್ತು ಸರಕಾರದ ಅಧೀನದಲ್ಲಿರುವ ಉದ್ಯೋಗ  ಮೀಸಲಾತಿಯ ಎಲ್ಲ ಅವಕಾಶಗಳನ್ನು ತಮ್ಮದಾಗಿಸಿಕೊಂಡು, ಈ ಎಲ್ಲ ಜಾತಿಗಳಲ್ಲಿರುವ ಅಸಹಾಯಕರಾದ ಅತ್ಯಂತ ದುರ್ಬಲರು ಮತ್ತು ದುರ್ಬಲರನ್ನು ಇನ್ನಷ್ಟು ಅವಕಾಶ ವಂಚಿತರನ್ನಾಗಿ ಮಾಡಲು ಅವಕಾಶ ಕಲ್ಪಿಸುತ್ತದೆ. ಇದರಿಂದ ಒಳ ಮೀಸಲಾತಿಯ ನೈಜ ಆಶಯಕ್ಕೇ ಕೊಡಲಿ ಏಟು ಬೀಳುತ್ತದೆ. ಇದಕ್ಕೆ ಮಹಾಒಕ್ಕೂಟ ತನ್ನ ಪ್ರತಿರೋಧವನ್ನು ಒಡ್ಡಲಿದೆ.

ಕಾಂತರಾಜ್ ವರದಿ ಬಹಿರಂಗ ಮಾಡಿ:

2015 ರಲ್ಲಿ ಸನ್ಮಾನ್ಯ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರವೇ ನೇಮಿಸಿರುವ ಶ್ರೀ. ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು,  ಸುಮಾರು 167 ಕೋಟಿ ರೂ ಖರ್ಚು ಮಾಡಿ ನಡೆಸಿರುವ,  ರಾಜ್ಯದ ಎಲ್ಲ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ವರದಿಯನ್ನು ಈ ಕೂಡಲೇ ಬಹಿರಂಗ ಗೊಳಿಸಬೇಕು ಎಂದು ಮಹಾಒಕ್ಕೂಟ ಸರಕಾರವನ್ನು ಆಗ್ರಹಿಸುತ್ತದೆ.

RELATED ARTICLES
- Advertisment -
Google search engine

Most Popular